Monday, January 25, 2021

ದೇವರಲ್ಲಿಡಿ ನಂಬಿಕೆ- ಬಿಟ್ಟು ಬಿಡಿ ಅಂಜಿಕೆ

ಮಲ್ಲಿಕಾ ಜೆ ರೈ ಪುತ್ತೂರು
ಅಂಕಣಕಾರರು

ಮನಸ್ಸು ಎತ್ತೆತ್ತಲೋ ಓಡುತ್ತಿರುತ್ತದೆ. ಮೊನ್ನೆ ಇದ್ದ ಹಾಗೆ ನಿನ್ನೆ ಇರುವುದಿಲ್ಲ. ನಿನ್ನೆ ಇದ್ದ ಹಾಗೆ ಇಂದು ಇರುವುದಿಲ್ಲ. ಅದು ಬಿಡಿ, ಒಂದು ಕ್ಷಣದ ಮೊದಲು ಇದ್ದ ಹಾಗೆ ಈಗ ಇರುವುದಿಲ್ಲ! ಮತ್ತೆ ನಿನ್ನೆಯದೇನು ಮಹಾ? ಅಂದ್ರೆ ಅದೂ ಹೌದು!!. ಯೋಚನಾಲಹರಿಗಳ ನಡುವೆ ಸಾಗುತ್ತಾ ಮನಸ್ಸು ಅದು ಹಾಗಿತ್ತು, ಇದು ಹೀಗಿದ್ದಿರಬೇಕಿತ್ತು ಎಂದು ಬಯಸುತ್ತದೆ.

ಒಮ್ಮೊಮ್ಮೆ ಹಕ್ಕಿಯಂತೆ ಹಾರಾಡುವ ಮನಸ್ಸು ಕೆಲವೊಮ್ಮೆ ಒಂಟಿಯಾಗಿ ತನಗ್ಯಾರೂ ಇಲ್ಲವೆಂಬ ಅನಾಥ ಪ್ರಜ್ಞೆಯಲ್ಲಿ ಬೇಯುತ್ತದೆ. ಆಗಲೇ ಆ ದೇವರು ಇದ್ದಾನೆ ಎಂಬ ನೆನಪಿನ ಬುತ್ತಿ ಅಕ್ಷಯವಾಗಿ ಒದಗುತ್ತದೆ. ಎಲ್ಲಾ ಮುಗಿಯಿತು ಅನ್ನುವಷ್ಟರಲ್ಲಿ ಮನಸ್ಸಿನ ಮೂಲೆಯಲ್ಲೊಂದು ಆಗ ತಾನೇ ಮೊಳಕೆ ಬಂದು, ಮಣ್ಣನ್ನು ಮೇಲೆ ನೂಕಿ ಬಂದ ತಳಿರಿನ ಹಾಗೇ ಆಸೆ ಅಥವಾ ಭಾವ ಬೆಳೆಯತೊಡಗುತ್ತದೆ. ಇದೂ ಸೃಷ್ಟಿಯ ಅದ್ಭುತ ರಹಸ್ಯಗಳಲ್ಲಿ ಒಂದಾಗಿದೆ.

ಹೇಗೇಗೋ ಮನಸ್ಸು ಆಡಿದಾಗಲೇ ಕೆಲವೊಮ್ಮೆ ಎಷ್ಟೇ ಒಳ್ಳೆಯ ಗುಣ ನಡತೆ ಯಿದ್ದವರೂ ಅರಿತೋ, ಅರಿಯದೆಯೋ ತಪ್ಪುಗಳನ್ನೆಸಗುತ್ತಾರೆ. ಅದರಿಂದ ಪಡಬಾರದ ಪಾಡು ಪಟ್ಟು ನೋವು, ದುಃಖ ಕೆಲವೊಮ್ಮೆ ಮರಳಿ ಬರಲಾಗದ ಸಾವಿನೊಂದಿಗೆ ಕೊನೆಯಾಗುತ್ತಾರೆ. ಹಾಗಾಗಿ ಮನಸ್ಸನ್ನು ನಮ್ಮ ಸ್ವಾಧೀನದಲ್ಲಿ ಇರಿಸಿಕೊಳ್ಳಲು ಕಲಿಯಬೇಕು.

ಈ ಜೀವನವೇ ಒಂದು ಪಾಠಶಾಲೆ. ಅದರಲ್ಲಿ ಎಲ್ಲರೂ ವಿದ್ಯಾರ್ಥಿಗಳೇ .ಈ ಜೀವನವೆಂಬ ಶಾಲೆಯಲ್ಲಿ ಹೆಚ್ಚು ತಿಳಿದವರು ವಿದ್ವಾಂಸರು, ಕಡಿಮೆ ತಿಳುವಳಿಕೆಯವರು ಅಲ್ಪ ಜ್ಞಾನಿಗಳೆಂದು ಭೇದ ಭಾವವಿಲ್ಲ. ಅಲ್ಲದೇ ಎಲ್ಲರ ಬದುಕಿನ ರೀತಿ ನೀತಿಗಳು ಒಂದೇ ತೆರನಾಗಿರುವುದೂ ಇಲ್ಲ!. ಹೇಗೆ ಮನುಷ್ಯರ ರೂಪ ಗಾತ್ರಗಳಲ್ಲಿ ವ್ಯತ್ಯಾಸವಿದೆಯೋ, ಹಾಗೆಯೇ ನಡೆನುಡಿಗಳು ಕೂಡಾ ಬೇರೆ ಬೇರೆಯಾಗಿರುತ್ತವೆ. ಅದಲ್ಲದೇ ಭೂಮಿಯ ಮೇಲೆ ಭೌಗೋಳಿಕ ವ್ಯತ್ಯಾಸಗಳು ಇರುವಂತೆ ಮನುಷ್ಯರಲ್ಲೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಶಾರೀರಿಕ ವ್ಯತ್ಯಾಸಗಳು ಇದ್ದೇ ಇರುತ್ತವೆ.

ಆದರೆ ಒಂದು ಕಾಕತಾಳೀಯವಿರಬಹುದು. ಆಗ ತಾನೇ ಹುಟ್ಟಿದ ಮಗುವಿನಲ್ಲಿ ವ್ಯತ್ಯಾಸಗಳು ಗೋಚರಿಸುವುದಿಲ್ಲ. ಅದರಿಂದ ಕೆಲವೊಮ್ಮೆ ಗುಣನಡತೆ ಬದಲಾದಾಗ ,ತಮಾಷೆಗೆ ಹೇಳುವ ಮಾತುಗಳು ಇರುತ್ತವೆ. ಆಸ್ಪತ್ರೆಯಲ್ಲಿ ಮಗು ಅದಲು ಬದಲು ಆಯಿತೋ ಏನೋ ಎಂದು!!?. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಹತ್ತಿಪ್ಪತ್ತು ಮಕ್ಕಳು ಏಕಕಾಲದಲ್ಲಿ ಹುಟ್ಟಿದರೆ ಸಾಮಾನ್ಯವಾಗಿ ಇಂತಹ ಯೋಚನೆಗಳು ಬರುವುದು ಸರ್ವೇಸಾಮಾನ್ಯ. ಆದರೆ ಹಾಗಾಗುವುದಿಲ್ಲ ಎಂಬ ಭರವಸೆ ಮುಖ್ಯವಾಗಿ ನಮ್ಮೊಳಗಿರಬೇಕು ನಿತ್ಯ.

ಕೆಲವೊಮ್ಮೆ ನಾವು ಇಟ್ಟ ಭರವಸೆಗಳು ಕುಸಿದು ನಮ್ಮನ್ನು ಪ್ರಪಾತಕ್ಕೆ ತಳ್ಳಿ ಬಿಡುವುದುಂಟು. ವಿಶ್ವಾಸವಿಟ್ಟು ಯಾರಲ್ಲಾದರೂ ವ್ಯವಹಾರ ಕುದುರಿಸಿ ಕೊನೆಗೆ ಮೋಸ ಮಾಡಿ ಓಡಿ ಹೋಗುವವರೂ ಇದ್ದಾರೆ. ಹಣ ಮತ್ತು ಪ್ರೀತಿಯ ವಿಷಯಗಳಲ್ಲಿ ಹೆಚ್ಚಾಗಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಹಾಗೇನಾದರೂ ಆದರೆ ಬಾಳಿನ ಕೊನೆಯ ತನಕ ಅದು ಪಾಠವಾಗಿಯೇ ಮನದೊಳಗೆ ನಿಂತುಬಿಡುತ್ತದೆ.

ಪ್ರಶಂಸೆ ಮತ್ತು ಟೀಕೆಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಅಥವಾ ಒಂದೇ ಮುಖದ ಎರಡು ಕಣ್ಣುಗಳಂತೆ. ಪ್ರಶಂಸೆ ಬಂದಾಗ ಉಬ್ಬಿ ಹೋಗಬಾರದು. ಅದೇ ರೀತಿ ವ್ಯತಿರಿಕ್ತ ಟೀಕೆಗಳು ಎದುರಾದಾಗಲೂ ಕುಗ್ಗಬಾರದು. ಈ ಲೋಕ ನಿಂತಿರುವುದೇ ಕೊಡುಕೊಳ್ಳುವಿಕೆಗಳ ಸಂಬಂಧದಿಂದ. ಆದರೆ ಮನಸ್ಸಿನ ಭಾವನೆ ಯೆಂಬುದು ವ್ಯಾಪಾರದ ಮಟ್ಟಕ್ಕೆ ಬರಲಾರದು. ಮನದೊಳಗಿನ ಭಾವನೆಗಳು ಸುಳಿವು ಸೆಳೆತಗಳ ಸಮ್ಮಿಶ್ರಣವಾಗಿದೆ. ಹೊಗಳಿಕೆ ಯಾ ತೆಗಳಿಕೆಗಳಿಗೆ ಮನಕೊಡದೇ ತನ್ನ ಪಾಡಿಗೆ ತಾನು ಯಾರಿರುತ್ತಾನೋ ಆತನು ಎತ್ತರದ ವ್ಯಕ್ತಿತ್ವದವನೆಂದು ತಿಳಿಯಲು ಸಾಧ್ಯವಿದೆ. ಏನನ್ನೂ ಸಾಧಿಸದೇ ಪ್ರಶಸ್ತಿಗಳ ಗೆದ್ದವರನ್ನು ಕಾಣಬಹುದು. ಅದು ಕಾಂಚಾಣದ ಮಹಿಮೆಯೋ ಎಂಬುದನ್ನು ಪರಾಂಬರಿಸಿ ನೋಡಿದರೆ ಅರಿವಾಗಬಹುದೋ ಏನೋ. ಗೌರವ ಡಾಕ್ಟರೇಟ್ ಗಳು ಅದೇ ಹಾದಿಯಲ್ಲಿ ಇದ್ದಾವೆ!.

ಕಾಲಹರಣ ಮಾಡಿಕೊಂಡು ಕಾಲ ಕಳೆಯುವ ಮಂದಿಗೇನೂ ಕೊರತೆಯಿಲ್ಲ.ಹಾಗೆಯೇ ಬಡಾಯಿ ಮಾತು ಕೊಚ್ಚಿಕೊಂಡು ದಿನವ ತಳ್ಳುವವರೂ ಇದ್ದಾರೆ.ಎಲ್ಲಾ ಜನ್ಮಗಳಿಗಿಂತಲೂ ಮನುಷ್ಯ ಜನ್ಮ ಶ್ರೇಷ್ಠ. ನಾವು ಅದನ್ನು ಸಾರ್ಥಕಪಡಿಸಿಕೊಳ್ಳಲು ಸಿಕ್ಕಿದ ವರವೆಂದು ಅರಿಯಬೇಕಾಗಿದೆ. ಅದನ್ನು ನಾವು ಹೊಗಳುವುದಕ್ಕಾಗಲೀ ಅಥವಾ ನಿಂದಿಸುವುದಕ್ಕಾಗಲೀ ಯಾಕೆ ವ್ಯರ್ಥ ಮಾಡಬೇಕು. ಅವರವರ ಒಳಿತು ಕೆಡುಕುಗಳನ್ನು ಅವರವರೇ ಅನುಭವಿಸುತ್ತಾರೆ. ಜ್ವರ ಬಂದಾಗ ಕಹಿ ಗುಳಿಗೆ ಅರೆದು ಕೊಡುವ ಮಂದಿ ಸಾಕಷ್ಟಿದ್ದರೂ ಕಹಿ ಗುಳಿಗೆಯನ್ನು ಜ್ವರ ಬಂದವನು ನುಂಗಬೇಕೇ ಹೊರತು ಸಲಹೆ ನೀಡಿದವರಲ್ಲ ಎಂಬುದು ಸ್ಪಷ್ಟ.

ಆದರೆ ಕೆಲವೊಮ್ಮೊಮ್ಮೆ ಯಾರೋ ಮಾಡಿದ ಕೆಡುಕುಗಳು ಮತ್ತೊಬ್ಬರಿಗೆ ಅರಿವಿಲ್ಲದೆಯೋ, ಅರಿತೋ ತಟ್ಟುತ್ತವೆ. ಆಗ ಮಾತ್ರ ಯಾರಿಂದಲೂ ರಕ್ಷಿಸಲಸಾಧ್ಯ. ಆಗ ಒಬ್ಬನೇ ಒಬ್ಬ ರಕ್ಷಿಸುವನೆಂಬ ಏಕಮಾತ್ರ ಆಧಾರ ನಮ್ಮೊಳಗೆ ಮೂಡಿದರೆ ಬದುಕಿನಲ್ಲಿ ಎಂತಹ ಕಗ್ಗಂಟಾದರೂ ಅದನ್ನು ಬಿಡಿಸಬಹುದು.

ಸದಾ ಆತನ ಧ್ಯಾನ, ಸ್ಮರಣೆ ಅತ್ಯಗತ್ಯ. ಪ್ರತಿ ಮಾತು ಮಾತಲ್ಲಿ ಆತನದೇ ಉಚ್ಛಾರ ಬೇಕು. ಏಳುವಾಗಲೂ ಆತನ ಗುಣಗಾನ ಮಾಡಬೇಕು. ನೋವಾದಾಗಲೂ ಆತನ ಹೆಸರೇ ಉಸಿರಾಗಬೇಕು. ಹೌದು ಸಂತೋಷದಲ್ಲೂ ಆತನೇ ಸರ್ವಸ್ವವಾಗಬೇಕು. ಕುಳಿತಾಗಲೂ, ನಿಂತಾಗಲೂ, ನಡೆಯುವಾಗಲೂ, ನಿದ್ದೆ ಮಾಡುವಾಗಲೂ, ಕಾರ್ಯ ಮಾಡುವಾಗಲೂ, ನೋವಾದಾಗಲೂ, ನಲಿವಿದ್ದಾಗಲೂ, ಸಿಟ್ಟು, ಕೋಪ, ಬೇಸರ ಬಂದಾಗಲೂ ಆತನ ನಾಮಸ್ಮರಣೆ ಒಂದೇ ಇರಬೇಕು. ಬದುಕಿನ ಹೆಜ್ಜೆಗೆ ಸ್ವಲ್ಪವಾದರೂ ಮೃದುತ್ವ ದೊರೆಯಲು ಭಗವನ್ನಾಮ ಸ್ಮರಣೆಯೊಂದೇ ಮೂಲಮಂತ್ರ ವಾಗಿದೆ.

ಮಕ್ಕಳಿಗೆ ಕೊಟ್ಟ ಬಾಳೆಹಣ್ಣನ್ನು ಯಾರೂ ಇಲ್ಲದ ಸ್ಥಳದಲ್ಲಿ ತಿಂದು ಬನ್ನಿ ಎಂದಾಗ ಎಲ್ಲಾ ಮಕ್ಕಳು ಅಡಗಿ ಕೂತು ತಿಂದು ಬಂದರು. ಆದರೆ ಒಬ್ಬ ಮಾತ್ರ ತನಗೆ ಕೊಟ್ಟ ಬಾಳೆಹಣ್ಣನ್ನು ತಿನ್ನದೇ ಕೈಯಲ್ಲಿ ವಾಪಾಸು ತಂದದ್ದಕ್ಕೆ ಗುರುಗಳು ಕಾರಣ ಕೇಳುತ್ತಾರೆ. ಯಾರೂ ಇಲ್ಲದ ಸ್ಥಳ ನನಗೆ ಸಿಗಲಿಲ್ಲ ಎಂದು ಹೇಳಿದ ಆ ಮಗು ರಾಮಕೃಷ್ಣ ಪರಮಹಂಸರು. ಸಣ್ಣವರಿರುವಾಗಲೇ ದೇವರೊಲುಮೆಯೆಂದರೇನೆಂದು ಅರಿತ ಪರಮ ಪಾವನರು. ಹಾಗಾಗಿ ಬಾಳಿನುದ್ಧಕ್ಕೂ ದೇವರ ಮೇಲೆ ಭಾರ ಹಾಕಿ ಸತ್ಕಾರ್ಯಗೈಯೋಣ. ಇನ್ನು ತಡ ಯಾಕೆ ಬಿಟ್ಟು ಬಿಡಿ ಅಂಜಿಕೆ?…..

ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು
ಅಂಕಣಕಾರರು- Advertisement -

MOST POPULAR

HOT NEWS

Related news

LEAVE A REPLY

Please enter your comment!
Please enter your name here

error: Content is protected !!