Monday, April 19, 2021
spot_imgspot_img
spot_imgspot_img

ಸದ್ಭಾವನೆಗಳಿಗೆ ತೆರೆದಿರಲಿ ಮನ

ಮಲ್ಲಿಕಾ ಜೆ ರೈ ಗುಂಡ್ಯಡ್ಕ

ಕ್ಯಾಲೆಂಡರ್ ವರ್ಷ ಮುಗಿದು ಹೊಸ ಕ್ಯಾಲೆಂಡರ್ ದಿನ ಪ್ರಾರಂಭ ಅದುವೇ ಜನವರಿ ೧. ಅಂದರೆ ಈ ದಿನ. ಮನದೊಳಗಿನ ಭಾವನೆಗಳಿಗೆ ವಿಶೇಷವಾಗಿ ಕನಸು ಕಾಣುವ ದಿನವೂ ಹೌದು. ಶಾಲೆ ಕಾಲೇಜು ಮಕ್ಕಳು ತಮ್ಮ ಒಡನಾಡಿಗಳೊಂದಿಗೆ, ಬಂಧುಮಿತ್ರರಿಗೆ ನಾವಿನ್ನು ಮುಂದಿನ ವರ್ಷ ಭೇಟಿಯಾಗೋಣ ಅನ್ನುತ್ತ ನಿನ್ನೆ ಹೇಳಿದ ಮಾತು, ನನಸಾದ ದಿನವಾಗಿದೆ.

ಮುಂದಿನ ವರ್ಷ ಅಂತಂದಾಗ ಅದು ಎಷ್ಟು ದೂರದ ಭೇಟಿ ಅಂತನಿಸೋದು ಸಹಜ. ಆದರೆ ನಿನ್ನೆ ದಿನದ ಬಾಗಿಲಲ್ಲಿ ನಿಂತಾಗ ಬೆಳಕಿನ ಆ ಸೂರ್ಯನನ್ನು ನೋಡುತ್ತ ಹೇಳಿದ ಮಾತು ಈ ಹೊಸ ಕ್ಯಾಲೆಂಡರ್ ವರ್ಷಕ್ಕೆ ಕಾಲಿಟ್ಟಾಗಿದೆ. ಇನ್ನೇನು ಮನದ ಭಾವನೆಗಳು ಹೊಸ ವರ್ಷದ ಕ್ಯಾಲೆಂಡರ್ ನೊಳಗೆ ಜೋತು ಬಿದ್ದಾಗಿವೆ. ಮುದ್ದಿನಿಂದ ಮೊಮ್ಮಕ್ಕಳು ತಾತ ಅಜ್ಜಿಯರ ಕೊರಳಿಗೆ ಜೋತು ಬೀಳುವ ಹಾಗೆ .ಅಷ್ಟೇ ಹೊರತು ಅದೇ ರಾತ್ರಿ, ಅದೇ ಹಗಲು,ಅದೇ ಸೂರ್ಯ, ಅದೇ ಚಂದ್ರ, ಅದೇ ಭೂಮಿ ಅದೇ ಆಕಾಶ. ನೋಡುವ ನೋಟಕ್ಕೆ ಹೊಸ ಭಾಷ್ಯ ಬರೆಯುವ ಸಾಧ್ಯತೆಯಿರಬಹುದು. ಅಥವಾ ಅದೇನು ದೊಡ್ಡ ವಿಷಯವೇ ಅಲ್ಲ ಎಂಬಂತೆ ಸುಮ್ಮನಿರಲೂ ಬಹುದು.

ಆದರೆ ಆ ಹುಮ್ಮಸ್ಸು ಈ ವರ್ಷಕ್ಕೆ ಸ್ವಲ್ಪ ಅಡಚಣೆಯನ್ನು ಮಾಡಿದೆ ಎಂದೆನ್ನಬಹುದು. ಶಾಲಾಕಾಲೇಜುಗಳು ಇನ್ನೂ ಪ್ರಾರಂಭವಾಗಿಲ್ಲ. ಹಾಗಾಗಿ ಮಕ್ಕಳು ಮುಖತಃ ಹೇಳುವ ಮಾತಂತೂ ಅಸಾಧ್ಯ. ಆದರೆ ಅದರ ಚಿಂತೆಯಿಲ್ಲ. ಕೈಯಲ್ಲಿನ ಮೊಬೈಲ್ ಎಲ್ಲದಕ್ಕೂ ಅವಕಾಶ ನೀಡುತ್ತಿದೆ. ಆದರೆ ಅದನ್ನು ಉಪಯೋಗಿಸುವುದರಲ್ಲಿ ಕೊಂಚ ಜಾಣ್ಮೆಯಿರಬೇಕು. ಅತಿಯಾದರೆ ಅಮೃತವೂ ಕೂಡ ವಿಷವಾಗುವುದುಂಟು. ಯಾವುದಕ್ಕೂ ಕೊಂಚ ಮಿತಿಯಿರಬೇಕು ಅಗ ಬದುಕು ಸುಂದರವಾದ ಹೂವಿನಂತೆ ಅರಳಿ ಸಾರ್ಥಕತನವನ್ನು ಹೊಂದಲು ಸಾಧ್ಯವಾಗುತ್ತದೆ.

ಗೋಡೆಯ ಮೊಳೆಯ ಮೇಲಿನ ೨೦೨೧ರ ಕ್ಯಾಲೆಂಡರ್ ತನ್ನ ಸ್ಥಾನ ಭದ್ರವಾಗಿಸಿಕೊಂಡು ತಯಾರಾಗಿ ನಿಂತಿದೆ. ಅದೇ ಜಾಗದಿಂದ ಹಳೆಯ ಕ್ಯಾಲೆಂಡರ್ ನ ನಿರ್ಗಮನವೂ ಆಗಿಹೋಗಿದೆ. ಅದು ಗೋಡೆಯಲ್ಲಿ ಅಲಂಕರಿಸುವುದನ್ನು ಕಂಡಾಗ ಮದುವೆಗೆ ಕುಳಿತ ಮದುಮಕ್ಕಳ ನೆನಪಾಗಲೂಬಹುದು.ದಿನದಿನವೂ ಆದಿತ್ಯ ಅಯುಷ್ಯವನ್ನು ಕಸಿದುಕೊಳ್ಳುತ್ತಾನೆ. ಹೀಗೆ ಪ್ರತಿದಿನದ ಸೂರ್ಯೋದಯವಾದಾಗಲೂ ಒಂದೊಂದೇ ದಿನವು ಕಳೆಯುತ್ತ ಹೋಗುತ್ತದೆ. ಭೂಮಿಯ ಮೇಲೆ ನಮ್ಮ ಇರುವಿಕೆಯು ಕೂಡಾ ಹಾಗೇ ಆಗಿದೆ. ಆ ಒಂದು ದಿನ ಬಂದಾಗ ಹೇಳದೆ ಕೇಳದೆ ಹೋಗುವ ಜಾಡು ಪಾಡು ಎಲ್ಲರದು. ಹಾಗಾಗಿ ಮನದೊಳಗೆ ಸದುದ್ಧೇಶವನ್ನು ಇರಿಸಿಕೊಳ್ಳುತ್ತ ಬದುಕು ಸಾಗಿಸುವ ಜಾಯಮಾನವಿರಬೇಕು .

ಕ್ಯಾಲೆಂಡರ್ ಗಾದರೆ ಕೊನೆ ಕ್ಷಣವಿದೆ, ಹೊಸದು ಬರುತ್ತದೆ. ಅದು ಎಲ್ಲರಿಗೂ ಗೊತ್ತಿದೆ. ಆದರೆ ಬದುಕು ಹಾಗಲ್ವಲ್ಲ. ಕೊನೆ ಗೊತ್ತಿರದ ಈ ಬದುಕಿನಲ್ಲಿ ಮನದೊಳಗೆ ಭಗವನ್ನಾಮ ಸ್ಮರಣೆಯನ್ನು ಯಾವತ್ತಿಗೂ ತುಂಬಿಕೊಂಡೇ ಬಾಳುತ್ತಿರಬೇಕು. “ದಯಾಸಾಗರನಾದ ಶಂಕರನನ್ನು ಬಹುವಿಧದಲ್ಲಿ ರಮ್ಯಗಾನದಿಂದ ಪೂಜಿಸುವ ಕಾರ್ಯ ನಿನ್ನೆಗೇ ಮುಗಿದು ಹೋಗುವುದೆಂದಿಲ್ಲ. ಆ ಕ್ಯಾಲೆಂಡರ್ ನ ಸಂಧ್ಯಾಕಾಲವದು ಪ್ರಾಪ್ತಿಯಾಯಿತು. ಮತ್ತೆ ಹೊಸದು ಹುಟ್ಟಿ ಬಂದಿದೆ. ಬಳಿಕ ಯುಗಾದಿಯಂತೆ ಸಂಭ್ರಮಿಸಲಿದೆ. ದಿನಗಳು ಸಾಗುತ್ತಲೇ ಇರುತ್ತವೆ. ಬೇರೆ ಇಸವಿಯಾಗಿ ರೂಪಾಂತರಗೊಂಡಿದೆ ಅಷ್ಟೆ. ಕಾಲಚಕ್ರದ ನಡುವೆಯೇ ಈ ಪಯಣ. ಚಕ್ರಕ್ಕೆ ಬರಿದೇ ಸುತ್ತುವ ಕೆಲಸ. ಅದು ನಿರಂತರವಾಗಿ ಸುತ್ತುತ್ತಿರುತ್ತದೆ. ಸಾಗುತ್ತಿರುವುದೊಂದೇ ಉಳಿದ ದಾರಿ. ಆ ದಾರಿಯಲ್ಲಿ ಒಳಿತಿನ ಹೆಜ್ಜೆಗುರುತು ಮೂಡಿಸಲು ಒಂದಷ್ಟು ಪ್ರಯತ್ನ ಪಡಬೇಕು‌.ಅದು ಬದುಕಿನ ಹೆಜ್ಜೆಗೆ ಪಲ್ಲವಿ ದೊರೆತಂತೆ. ಯಶಸ್ಸಿಗೆ ಅದುವೇ ರಹದಾರಿ.

ಮಾಡಿದ ಕರ್ಮದನುಸಾರವಾಗಿ ಪುಣ್ಯ ಬರುತ್ತದೆ. ಈ ಭಾವನೆಯಿಂದ ದೇವರು ಮಾಡಿಸಿದ್ದನ್ನ ನಾವು ಮಾಡುತ್ತೇವೆ ಅಥವಾ ಪಡೆದಿದ್ದೇವೆ ಎಂಬ ಭಾವನೆಯು ಸ್ಪೂರ್ತಿಯಾಗುತ್ತದೆ. ಕರ್ಮಫಲಕ್ಕೆ ಸ್ನೇಹದ ಸಂಗವು ಬೇಕಿಲ್ಲ. ಆದರೆ ಒಳಗಿನ ಉಪಾಸನೆ ನಿತ್ಯವೂ ತೃಪ್ತಭಾವದಲ್ಲಿರಬೇಕು. ದೇವರು ಬಿಂಬ. ನಾವು ಪ್ರತಿಬಿಂಬಗಳು. ಅಲಂಕಾರ ಮಾಡಿ ಕನ್ನಡಿಯೆದುರು ನಿಂತಂತೆ ದೇವರೆದುರು ನಾವು. ದೇವರು ತುಂಬಾ ಒಳ್ಳೆಯವನು. ನಮ್ಮನ್ನು ದಿನದಿನವೂ ಒಳ್ಳೆಯವರನ್ನಾಗಿಸುತ್ತಾನೆ. ಲಕ್ಷ್ಮೀಪತಿ ಎಂದು ಉಪಾಸನೆ ಮಾಡಿದರೆ ನಮ್ಮನ್ನೂ ಹಾಗೇ ಮಾಡುತ್ತಾನೆ. ” ಯಥಾ ಉಪಾಸತೆ ತದೈವ ಭವಂತಿ”ಇಡೀ ಜಗತ್ತಿಗೆ ಆಶ್ರಯದಾತ ಭಗವಂತ. ಇಡೀ ಜಗತ್ತಿಗೆ ಜಗದಾಶ್ರಯ ಆ ಭಗವಂತ. ಜ್ಞಾನಿಯಾದವರು ನಿರಾಶ್ರಯ ಅಂತ ದೇವರನ್ನು ಉಪಾಸನೆ ಮಾಡುತ್ತಾರೆ. ಅವರಿಗೆ ಇನ್ನಾರ ಹಂಗೂ ಬೇಕಾಗಿಲ್ಲ. ನಿತ್ಯತೃಪ್ತನಾಗಿ ಬಾಳಲು ನಿತ್ಯತೃಪ್ತ ಭಗವಂತನ ಉಪಾಸನೆ ಮಾಡಬೇಕು.

“ಯಾರು ಮುನಿದರೇನು ನಮಗಿನ್ನಾರು ಒಲಿದರೇನು| ಕ್ಷೀರಸಾಗರ ಶಯನ ಮುಕುಂದನ ಸೇರಿದಂತ ಹರಿದಾಸರಿಗೆ||”- ಈ ಭಾವನೆಯಿಂದ ದೇವರನ್ನು ನಂಬಿ ತೃಪ್ತಿಯಿಂದ ಬದುಕು ನಡೆಸಲು ಸಾಧ್ಯವಿದೆ. ಆದರೆ ಮನುಷ್ಯರು ಒಂದರ್ಥದಲ್ಲಿ ಅಸ್ವತಂತ್ರರು. ಚಿತ್ತದೊಳಗೆ ಹಿಂದಿನ ನೆನಪು ಬರುವಾಗ ಮತ್ತೆ ಕಾಡುತ್ತಾ ಲೌಕಿಕ ಜೀವನಕ್ಕೆ ಕರೆದೊಯ್ಯಲ್ಪಡುತ್ತದೆ. ತೊಂದರೆ ಕೊಡುವ ನೆನಪುಗಳನ್ನು ಹೊರದೂಡಲು ಕಷ್ಟವಾದರೂ ಭಾಗವತವನ್ನು ಕೇಳಿದರೆ ಸಾಧ್ಯವಾಗುವುದು. ಆಸೆ ಕಡಿಮೆಯಾಗಲು ಇದುವೇ ಸುಲಭದ ದಾರಿ. ನೆನಪುಗಳು, ಕನಸುಗಳು ಯಾವಾಗ ನಿಯಂತ್ರಿಸಲ್ಪಡುತ್ತವೆಯೋ ಆಗ ಆಸೆ ಬಿದ್ದುಹೋಗುತ್ತದೆ. ಪರಿಗ್ರಹ ಅಂದರೆ ಅಭಿಮಾನವನ್ನು ಇಟ್ಟುಕೊಳ್ಳುವುದು. ಬೇಡ ಬೇಡ ಅಂದ್ರೂ ಬಿಡದ, ಬೇಕು ಅಂದಾಗ ಸಿಗದಾದಾಗ, ಸ್ವಾಮಿ ಇದೆಲ್ಲವೂ ನಿಂದೇ. ತನು ನಿನ್ನದು ಜೀವನ ನಿನ್ನದು ರಂಗ, ಅನುದಿನದಲಿ ಬಹೋ ಸುಖ ದುಖ ನಿನ್ನದಯ್ಯಾ. ನನ್ನದೆನ್ನುವುದು ಬರೀ ಭ್ರಮೆ ಮಾತ್ರ. ಈ ದೇಹ ಬಿದ್ದುಹೋಗುವುದೆಂದು ತಿಳಿಯದ ನಮಗೆ ನಾನು ನನದೆಂಬ ಮಮಕಾರ ಯಾಕೆ ಬೇಕು? ನಂದು ಅಂದುಕೊಂಡಾಗ ಬರೀ ದುಃಖ. ಅಭಿಮಾನ ಬಿಟ್ಟಾಗ ಆಸೆಯನ್ನು ತೊರೆದಾಗ ನಾನು ನನ್ನದೆನ್ನುವುದನ್ನು ಬಿಟ್ಟು ಬದುಕಲು ಏನು ಮಾಡಿಸುತ್ತಾನೋ ಅದನ್ನು ಮಾಡಲು ದೇವರ ಚಿತ್ತವಲ್ಲದೇ ಇನ್ನಾವುದರಿಂದ ಸಾಧ್ಯ.

ಕಾಲ ಸರಿಯುತ್ತಿರುತ್ತದೆ.ಅರಿವಿಗೆ ಬಾರದಂತೆ. ಹಾಗೆ ದಿನದ ೨೪ ಗಂಟೆ ಸದ್ದಿಲ್ಲದೆ ಸಾಗಿಹೋಗಿ ವರ್ಷದ ಜನವರಿ ತಿಂಗಳ ದಿನವೂ ಕೂಡಾ ಸುದ್ದಿಯಿಲ್ಲದೆ ಸದ್ದಿಲ್ಲದೇ ಸಾಗುತ್ತದೆ. ಮನುಷ್ಯ ಮಾತ್ರ ಅಬ್ಬರದಿಂದ ತಾನೇ ಎಂಬ ಅಹಂ ಇರಿಸಿ ಬಾಳುವೆ ನಡೆಸುತ್ತಾನೆ. ಅರಳುವ ಹೂವು ಗರ್ವ ಪಡುವುದಿಲ್ಲ. ಹೊತ್ತ ಭೂಮಿತಾಯಿ ತಾಳ್ಮೆಯಿಂದಿದ್ದಾಳೆ. ಬೀಸುವ ಗಾಳಿ ಹದವರಿತಿದ್ದಾನೆ. ಉರಿಯುವ ದಿನಪ ತನ್ನ ಕಾಯಕ ನಿಷ್ಠೆಯಿಂದ ಗೈಯುತ್ತಾನೆ. ಹೀಗೆ ಹಲವು ಕಾರ್ಯಗಳನ್ನು ತಮ್ಮದೇ ರೀತಿಯಲ್ಲಿ ತಮವಿರುವಾಗಲೂ ಮಾಡುತ್ತಾರೆ. ಮನುಷ್ಯ ಮಾತ್ರ ತಾನು ಮಾಡಿದ ಕಾರ್ಯಗಳಿಗೆ ಮನ್ನಣೆ ಪಡೆಯುವ ಹಂಬಲ ಯಾಕೋ ಎಂದು ಅರ್ಥವಾಗದೇ ಉಳಿದಿದೆ.

ಗಿಡಮರಗಳು ಪ್ರಕೃತಿಯೊಡನೆ ಬೆರೆತು ಚಿಗುರುತ್ತ ಹೂ ಬಿಡುವ ಸಮಯವಿದು. ಮಂದಮಾರುತನ ಸ್ಪರ್ಶಕ್ಕೆ ಪುಳಕಗೊಳ್ಳುವ ಹಸಿರ ಸಿರಿಗೆ ಭೂಮಿ ಭರವಸೆಯನ್ನೀಯುತ್ತದೆ. ಹಾಗೆಯೇ ಈ ದಿನ ನಿಲ್ಲದೇ ಸಾಗುವ ಪರಿ ಕೌತುಕದ ಹಾಡಾಗುತ್ತದೆ. ಹಾಗಾಗಿ ದಿನವೂ ಇದ್ದುದರಲ್ಲಿಯೇ ಸಂತಸ ಹೊಂದುವ ಪ್ರಯತ್ನವಿರಬೇಕು‌. ಕಾರ್ಯಗಳೆಲ್ಲವೂ ಸುಸೂತ್ರವಾದರೆ ಸರಿ. ಆಗಿಲ್ಲವೆಂದಾದರೆ ಉತ್ತರ ಹುಡುಕುವ ತಾಳ್ಮೆಯೂ ಬರಲಿ. ಹೊರತು ಅಡ್ಡಮಾರ್ಗ ಎಂದೆಂದಿಗೂ ಸರಿಯಲ್ಲ.

ಹೊಳೆಯುವ ವಸ್ತುಗಳೆಲ್ಲವೂ ಅಪ್ಪಟ ಬಂಗಾರವಾಗಲು ಸಾಧ್ಯವೇ ಇಲ್ಲ. ಆದರೆ ಬಂಗಾರಕ್ಕಿರುವ ಬೆಲೆ ಅವುಗಳಿಗೆ ಇರುವುದಿಲ್ಲ. ನೈಜ ಬದುಕು ಸತ್ಯಸುಂದರ. ಮಿಥ್ಯ ಬದುಕು ಮುಳ್ಳಿನ ಹಂದರ. ಅಪಾಯದ ಬೋರ್ಡ್ ನೋಡಿಯೂ ಕೂಡಾ ಮುಂದುವರಿಯುವುದು ಸಲ್ಲ. ಉಪಾಯ, ಜಾಣ್ಮೆಯಿಂದ ಅವಲೋಕಿಸುವುದರಲ್ಲಿದೆ ಜೀವನದ ಒಳಿತು. ಜನವರಿಯಲ್ಲಿ “ಜನ’ ಸಂತಸದಿಂದ ‘ವರಿ’ಅನ್ನುವ ಪದಗಳನ್ನು ಮೂಲೆಗುಂಪಾಗಿಸಲಿ. ಮನಸ್ಸು ಹೊಸ ಸದ್ಭಾವನೆಗಳಿಗೆ ತೆರೆದುಕೊಳ್ಳುವಂತಿರಲಿ.

ಮಲ್ಲಿಕಾ ಜೆ ರೈ ಗುಂಡ್ಯಡ್ಕ
ಅಂಕಣಕಾರರು
ಪುತ್ತೂರು


- Advertisement -

MOST POPULAR

HOT NEWS

Related news

error: Content is protected !!