Friday, April 19, 2024
spot_imgspot_img
spot_imgspot_img

ಇತಿ- ಮಿತಿ – ಮತಿ

- Advertisement -G L Acharya panikkar
- Advertisement -

ಮಲ್ಲಿಕಾ ಜೆ ರೈ ಪುತ್ತೂರು
ಅಂಕಣಕಾರರು

ಮನದೊಳಗೆ ನಮ್ಮದೇ ನೆನಪಿನ ಸುತ್ತ ಸುತ್ತುತ್ತಿದ್ದರೂ ಸುರುಳಿಯಂತೆ ಬಿಚ್ಚಿಕೊಳ್ಳಲಾಗದ ಅದೆಷ್ಟೋ ಕನಸುಗಳು ಮೊಳಕೆಯೊಡೆಯದೇ ಹಾಗೆಯೇ ಮಣ್ಣಲ್ಲಿ ಹೂತುಹೋಗಿ ಗೊಬ್ಬರ ವಾಗಿರಬಹುದು. ಅದು ಕೂಡ ಒಂದು ಸಂತಸವೇ. ಯಾಕೋ ಮನಸು ನಮ್ಮ ಹಿಡಿತಕ್ಕೆ ಸಿಗದೇ ಕೂತು ಮಂಡಿಗೆ ತಿನ್ನೋದರಲ್ಲಿಯೇ ಕಾಲವು ಕಳೆದು ಹೋಗುತ್ತಿದೆಯೇನೋ ಎಂದು ಅನ್ನಿಸತೊಡಗುತ್ತದೆ.

ಮನದೊಳಗೆ ಆತನೇ
ಅಂಗವಿಲ್ಲದ ರೂಪನೇ
ಕಂಡು ಆದೆ ಧನ್ಯನಾ
ನೆನೆವೆ ನಾ ಅನುದಿನಾ//

ಹೆತ್ತವರು ಪ್ರತ್ಯಕ್ಷ ದೇವರು, ಅದರಲ್ಲಿ ಎರಡು ಮಾತಿಲ್ಲ. ಹೆತ್ತವರ ಋಣವ ತೀರಿಸಲೆಂದು ಪ್ರೀತಿ ಗೌರವದಿಂದ ನೋಡಿ ಕೊಳ್ಳುವವರು ಅನೇಕ.

ಆದರೆ ಹೆತ್ತವರಿಗಿಂತಲೂ ಹೆಚ್ಚಾದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಇರಿಸಿಕೊಂಡು ಸೋದರ ಸೋದರಿಯರಿಗೆ ಸುಂದರವಾದ ಬದುಕಿನ ದೋಣಿ ನಡೆಸಲು ಬೇಕಾದ ಎಲ್ಲಾ ಆಸೆ ಆಕಾಂಕ್ಷೆಗಳನ್ನು( ತಮ್ಮ ಆಸೆಗಳನ್ನು ಗಾಳಿಗೆ ತೂರಿ) ಪೂರೈಸುವ ಹೃದಯವಂತರು ಇರುತ್ತಾರೆ. ಆದರೆ ಅದನ್ನು ಮರೆತು ಬಿಡುವಷ್ಟು ಕೃತಘ್ನರು ಇದ್ದಾರೆ. ತಮಗಾಗಿ ಮಿಡಿದ ಹೃದಯದ ಬಾಗಿಲಿಗೆ ಇಣುಕುವ ಸೌಜನ್ಯವನ್ನು ಕೂಡಾ ತೋರಿಸದ ಘಟಾನುಘಟಿಗಳು ಬಹಳವೇ ಮಂದಿ ಈ ಸಮಾಜದಲ್ಲಿ ಹತ್ತಿರದಲ್ಲೇ ಕಾಣಸಿಗುತ್ತಾರೆ.

ಭೂತಕಾಲದಲ್ಲಿ ಮಾಡಿದುಪಕಾರ ವರ್ತಮಾನಕ್ಕೆ ಮರೆತುಹೋದರೆ ಭವಿಷ್ಯದ ಗತಿಯೇನೋ ಮನುಜ ಎಂಬಂತಾಗುತ್ತದೆ. ಅವರವರ ನೋವು ನಲಿವು ಅವರವರಿಗೆ ಆದರೂ ಕೆಲವೊಂದು ಬಾರಿ
ಅವರ ಪಾಶವೀ ಮನಸ್ಸು ಹೇಗಿರುತ್ತದೆಯೋ ಆ ದೇವರೊಬ್ಬನೇ ಬಲ್ಲ. ಇದಕ್ಕೆ ಆ ದೇವರೇ ಉತ್ತರಿಸಲು ಶಕ್ತನಲ್ಲದೇ ಹುಲುಮಾನವರು ಏನು ಮಹಾ? ಇರುವ ಮೂರು ದಿನದ ಈ ಬದುಕು ಸುಂದರವಾಗಿರಬೇಕು, ಸತ್ಯತೆಯಿಂದಿರಬೇಕು, ನೀತಿಯಿರಬೇಕು ಎಂಬ ಆಕಾಂಕ್ಷೆ ಹೊತ್ತವರಿಗೆ ಹಿರಿಯರಲ್ಲಿ ಗೌರವಭಾವನೆ ಸಹಜವಾಗಿಯೇ ಇರುತ್ತದೆ.

ಎಲ್ಲಿ ಸುಳ್ಳು, ವಂಚನೆ, ಆತ್ಮದ್ರೋಹ, ಅಪನಂಬಿಕೆ ಬರುವುದೋ ಆಗ ದ್ವೇಷವು ಒಂದೊಂದೇ ಹೆಜ್ಜೆಯಿಡಲು ಪ್ರಾರಂಭ ಮಾಡುತ್ತದೆ. ಹಾಗಾಗಿ ಈ ಲೋಕದಲ್ಲಿ ಅರಿತೂ ಕೂಡಾ ಮುಖವಾಡ ಹಾಕದೇ , ಇರುವಂತಹ ಸತ್ಯಾಸತ್ಯತೆಯನ್ನು ಒಪ್ಪಿಕೊಂಡು ಬಾಳಿದರೆ ಮೂರುದಿನದ ಈ ಬಾಳು ಅವಿಸ್ಮರಣೀಯ ಆಗಬಹುದು. ಸತ್ಯಕ್ಕೆ ಒಂದು ಹೆಜ್ಜೆಯಾದರೆ ಸುಳ್ಳಿಗೆ ಹೆಜ್ಜೆಗಳೇ ಇರುವುದಿಲ್ಲ.

ಶ್ರಮಪಟ್ಟು ಬೆಟ್ಟಕ್ಕೆ ಹೊತ್ತೊಯ್ಯುವ ಕಲ್ಲು ನಿಧಾನವಾಗಿ ಹಾಗೂ ಅತೀ ಎಚ್ಚರಿಕೆಯಿಂದ ಮಾಡಬೇಕಾದ ಕೆಲಸ. ಆದರೆ ಒಂದೊಮ್ಮೆ ಬೆಟ್ಟದ ತುದಿಗೆ ತಲುಪಿದ ಮೇಲೆ ನಮ್ಮ ಕಣ್ಣ ದೃಷ್ಟಿ ಸದಾ ಕೆಳಮುಖವಾಗಿರಬೇಕು. ಅದೇ ರೀತಿ ಮನಸ್ಸೂ ಬಾಗುತ್ತಿರಬೇಕು. ಒಂದು ವೇಳೆ ತದ್ವಿರುದ್ಧವಾದರೆ ಕ್ಷಣಮಾತ್ರದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ.

ಹಾಗಾಗಿ ಶ್ರಮಪಡುವ ಮನಸ್ಸು ಯಾವತ್ತೂ ಮೋಜಿನ ದಾರಿಗೆ ಇಳಿಯುವುದಿಲ್ಲ. ಹಾಗೆಯೇ ಮನಸ್ಸಿನ ಭಾವನೆಗಳಿಗೆ ಚಿಂತನಾತ್ಮಕ ಶೋಧನೆಯು ಆಗುತ್ತಲೇ ಇರುತ್ತದೆ. ಮಾಡುವ ಕೆಲಸ ಸರಿಯೇ ಹೌದೇ ಅಲ್ಲವೇ, ಅಲ್ಲವೆಂದಾದರೆ ಹೇಗೆ ಸರಿ ಮಾಡಬಹುದು ಎಂಬಿತ್ಯಾದಿ ಯೋಚನೆಗಳು ಮನದೊಳಗಿನ ಕಶ್ಮಲತೆಯನ್ನು ಹೊರದೂಡುತ್ತವೆ.ನಾವು ಮೈಯನ್ನು ಸೋಪು ಹಚ್ಚಿ, ಸ್ನಾನ ಮಾಡಿ ಹೇಗೆ ಶುಚಿಯಾಗಿರಿಸಿ ಕೊಳ್ಳುತ್ತೇವೆಯೋ ಹಾಗೆ.

ಕೆಲವೊಮ್ಮೆ ಯೋಚನೆಗೆ ನಿಲುಕದಂತಹ ಕಾರ್ಯಗಳು ಉದ್ಭವಿಸಿ ಮನಸ್ಸಿಗೆ ಹೊಡೆತ ಕೊಡುತ್ತವೆ. ಅದು ಹೇಗೆಂದರೆ ಸಾಗರದ ಅಲೆಗಳು ದಡಕ್ಕೆ ಬಂದು ದಿನಾಲು ಹೊಡೆತ ಕೊಡುವಂತೆ. ದೊಡ್ಡ ಅಲೆಗಳು ನಂತರ ಬಂದು ಎಲ್ಲವನ್ನೂ ಶುಚಿ ಗೊಳಿಸಿದ ಹಾಗೆ.!! ನಿತ್ಯವೂ ಹೊಡೆತ ತಿನ್ನುವವನಿಗೆ ದೊಡ್ಡ ಹೊಡೆತವೇನೂ ಅನ್ನಿಸಲಾರದು. ಹಾಗೆಯೇ ಮಾತು, ಕೃತಿ ಇವೆಲ್ಲವುಗಳು. ಬದುಕು ಎಂಬ ಪುಸ್ತಕ ಎಲ್ಲರ ಬಳಿಯೂ ಇದೆ. ಅದನ್ನು ಚೆನ್ನಾಗಿ ಮನನ ಮಾಡಿದರೆ ಉತ್ತಮ ಫಲಿತಾಂಶ ದೊರಕುತ್ತದೆ. ಮನನ ಮಾಡಿ ಚೆನ್ನಾಗಿ ಓದದೇ ಇದ್ದರೆ ನಿರೀಕ್ಷಿತ ಫಲ ಸಿಗಲಾರದೇ ಹೋಗುತ್ತದೆ.

ಎಂದೋ ಯಾರೋ ಮಾಡಿದ ತಪ್ಪಿಗೆ ಈ ಜೀವನದ ಪುಟದಲ್ಲಿ ತಪ್ಪು ಚಿಹ್ನೆ ಬಿದ್ದಿರುತ್ತದೆ. ಅದನ್ನು ಸರಿಪಡಿಸಲಾಗದಿದ್ದರೂ ಮುಂದಿನ ಪುಟಗಳಲ್ಲಿ ಆ ತಪ್ಪು ಬಾರದಂತೆ ಎಚ್ಚರಿಕೆ ವಹಿಸಬೇಕು.ಇದಕ್ಕೆ ಆ ಎರಡು ಗಿಳಿಗಳನ್ನೇ ಉದಾಹರಿಸಬಹುದೇನೋ. ಆದರೂ ಹೆಚ್ಚು ಪಾಲು ಸಹವಾಸ ದೋಷದಿಂದಲೂ ಈ ರೀತಿ ಆಗುವುದುಂಟು.

ಋಷಿಯ ಆಶ್ರಮದಲ್ಲಿದ್ದ ಗಿಳಿ ಸದ್ವಿಚಾರಗಳನ್ನು ಕಲಿತಂತೆ ಆಗಬೇಕೇ ಹೊರತು ಕಳ್ಳನ ಒಡನಾಟದಲ್ಲಿದ್ದ ಗಿಳಿಯಂತೆ ದುರ್ವಿಚಾರಗಳನ್ನು ಕಲಿತು ದುಷ್ಟಬುದ್ಧಿಯನ್ನು ಬೆಳೆಸಿದಂತೆ ನಾವಾಗಬಾರದು. ನಮ್ಮ ಮನದೊಳಗಿನ ಅಂತರಾತ್ಮನ ಬಗ್ಗೆ ಒಂದು ಕ್ಷಣ ಯೋಚಿಸಿದರೆ ಸಾಕು. ಈ ಕ್ಷಣಿಕ ದೇಹ ಕಸಕ್ಕೆ ಸರಿಸಮ ವೆಂದೆನಿಸುವುದು.

ತಮ್ಮ ಮನೆ ಮಗಳು ಸುಖವಾಗಿರಬೇಕೆಂದು ಬಯಸುವುದು ತಪ್ಪಲ್ಲ. ಆದರೆ ಅದರಿಂದ ಮತ್ತೊಂದು ಮನೆ ಮಗಳು ಕಷ್ಟ ಅನುಭವಿಸುವಂತೆ ಮಾಡುವ ತಪ್ಪು ತೀರಾ ಅಕ್ಷಮ್ಯವಾದುದು. ಅದು ಒಂದೆರಡು ದಿನಗಳಿಗೆ ಸೀಮಿತವಲ್ಲ. ಬದುಕಿನ ಪ್ರಶ್ನೆಯಾಗಿ ಜೀವಮಾನ ಪೂರ್ತಿ ಕಾಡುವ ನೋವು. ಬದುಕು ಬಾಳಬೇಕೇ ಹೊರತು ನರಳುವಂತಾಗಬಾರದು.

ಬಡವನಾದರೆ ಏನು ಪ್ರಿಯೆ ಎಂಬ ಹಾಡಿನಂತೆ ನಮ್ಮೊಳಗೆ ಪ್ರೀತಿ, ನಂಬಿಕೆಗಳೆಂಬ ವಜ್ರಗಳೇ ನಮ್ಮಲ್ಲಿರಲು , ಬಾಳು ಸಂತಸದ ಮಹಲು ಆಗುವುದರಲ್ಲಿ ಎರಡು ಮಾತಿಲ್ಲ. ನಿಜವಾದ ಬಡತನ ಹೊರಗಿನ ಸ್ಥಿತಿಯಲ್ಲಿಲ್ಲ , ಮನದೊಳಗಿನ ಸುಂದರ ಭಾವನೆಗಳಲ್ಲಿ ಸಿರಿವಂತಿಕೆ ತುಂಬಿದ್ದರೆ ಅದುವೇ ನಿಜವಾದ ಸಮೃದ್ಧ ಸಿರಿತನ.

ಹೊರಗಿನ ನೋಟಕ್ಕೆ ಏನೂ ಕಾಣದ ಇಂತಹ ಜೀವನದ ದೋಣಿಯಲ್ಲಿ ಒಂದು ಸಣ್ಣ ತೂತಾದರೂ ಮುಳುಗುವ ಸಾಧ್ಯತೆಯೇ ಹೆಚ್ಚು. ಅಂತಿರುವಾಗ ಬಾಹ್ಯದ ಅವಶ್ಯಕತೆ ಗಿಂತಲೂ ಮನಸ್ಸಿನ ತುಮುಲವನ್ನು ಅರಿತು ಸಹಜತೆಯನ್ನು ಸ್ವೀಕರಿಸಿ ಹಾಸಿಗೆ ಇದ್ದಷ್ಟು ಕಾಲು ಚಾಚುವ ಬುದ್ಧಿಗೆ ಮನ ಮಾಡಬೇಕು. ಇತಿ- ಮಿತಿ- ಮತಿ ಅರಿತು ಬಾಳಬೇಕು. ಬದುಕು ಹಸನಾಗಲು ಇದಕ್ಕಿಂತ ಬೇರೇನೂ ಬೇಕಾಗಿಲ್ಲ.

ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು


- Advertisement -

Related news

error: Content is protected !!