Thursday, March 28, 2024
spot_imgspot_img
spot_imgspot_img

“ಭರವಸೆಯ ಜೀವನ ನಮ್ಮದಾಗಲಿ”

- Advertisement -G L Acharya panikkar
- Advertisement -

ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು
ಅಂಕಣಕಾರರು, ಕವಯಿತ್ರಿ

ಜೀವನವೆಂಬುದು ನಿರಂತರ ಹರಿಯುವ ನೀರಿನಂತೆ ಚಲನಶೀಲವಾಗಿರಬೇಕು. ಆಗ ಪರಿಶುದ್ಧವಾದುದನ್ನೇ ಹೊಂದಲು ಸಾಧ್ಯ, ಅನುಭವಿಸಲೂ ಸಾಧ್ಯ. ಬೇಡದ ಕಶ್ಮಲಗಳು ಹರಿಯುವ ನೀರಿನಲ್ಲಿ ಎಂದೂ ಉತ್ಪತ್ತಿಯಾಗ ಲಾರವು. ಅಂತೆಯೇ ಇತರ ಯಾವುದೇ ವಸ್ತುಗಳಾಗಲಿ ಉಪಯೋಗವಿದ್ದಾಗ ಚೆನ್ನಾಗಿ ಬಾಳಿಕೆ ಬರುತ್ತವೆ. ಉಪಯೋಗ ಕಡಿಮೆ ಯಾಯಿತೋ ಅದರ ಆಯುಷ್ಯ ಕಡಿಮೆಯಾಯಿತೆಂದೇ ಅರ್ಥ.

ಹೊಸ ಆಲೋಚನೆಗಳಿಗೆ ಮನದಲ್ಲಿ ಅವಕಾಶ ನೀಡಬೇಕು. ಆಗ ಕಣ್ಣುಗಳಲ್ಲಿ ಮಿಂಚಿನ ಹೊಳಪು ಕಾಣಿಸಿಕೊಳ್ಳುತ್ತದೆ. ನೋಟವು ಆಗ ದೂರದೃಷ್ಟಿಯಿಂದ ಕೂಡಿರುತ್ತದೆ. ಬಿಡುವೆಂಬುದು ಎಂದಿಗೂ ಬಾರದಂತೆ ಮನಸ್ಸನ್ನು ಪಳಗಿಸಿಕೊಳ್ಳಬೇಕು. ಮನಸ್ಸಿನ ಕೋರಿಕೆಯ ಹಿಂದೆ ಸ್ಪೂರ್ತಿದಾಯಕವಾದ ಉದ್ಧೇಶ ಇರಬೇಕು. ಆಗ ಅರ್ಧದಲ್ಲೇ ಕೈ ಬಿಡುವ ಆತಂಕ ಬಾರದು. ಒಂದು ಕಾರ್ಯ ಅದನ್ನು ಆಲೋಚಿಸಿ ಒಳಿತೆಂದಾದರೆ ಆ ತಕ್ಷಣವೇ ಹೆಜ್ಜೆ ಮುಂದಿಡಬೇಕು. ಅದರ ಫಲಾಫಲಗಳನ್ನು ದೇವರಿಗೇ ಬಿಟ್ಟುಬಿಡಬೇಕು.

ರಾಜಸಿಕ, ತಾಮಸಿಕ, ಸಾತ್ವಿಕ ಹೀಗೆ ಈ ಮೂರು ಗುಣಗಳಲ್ಲಿ ಯಾವುದಾದರೊಂದು ಗುಣವನ್ನು ಹೊಂದಿದ ಮನುಷ್ಯ, ತನ್ನ ಸಹವಾಸಗಳಿಂದ ಎಲ್ಲವನ್ನೂ ಮೀರಿ ದೈವತ್ವದ ಗುಣವನ್ನು ಪಡೆಯಲು ಸಾಧ್ಯವಿದೆ. ಅದಕ್ಕಾಗಿ ಒಳ್ಳೊಳ್ಳೆಯ ಗ್ರಂಥಗಳನ್ನು ಓದಬಹುದು. ಆಧ್ಯಾತ್ಮದ ಉನ್ನತಿಗಾಗಿ ಪವಿತ್ರ ಸ್ಥಳಗಳಿಗೆ ಭೇಟಿ ನೀಡಬಹುದು. ದೇಹವನ್ನು ಹಗುರವಾಗಿಸಿ ಕೊಳ್ಳಲು ಭಗವಂತನ ನಾಮಸ್ಮರಣೆ ಮಾಡಬೇಕು. ಯೋಗ, ಆಸನ, ಸೂರ್ಯ ನಮಸ್ಕಾರಗಳಂತಹ ಚೈತನ್ಯದ ಸೆಳೆಯನ್ನು ಹೆಚ್ಚಿಸಿಕೊಳ್ಳಬೇಕು.

ಇದು ಭೂಮಿಯ ಫಲವತ್ತತೆಗೆ ಬೇಕಾಗುವ ಸಾವಯವ ಗೊಬ್ಬರವನ್ನು ನೀಡಿ ದಂತೆ ಉತ್ತಮವಾದ ಫಲವತ್ತತೆಯನ್ನು ಬಾಳಿನಲ್ಲಿ ದೊರಕಿಸಬಲ್ಲುದು. ಅದೇ ರೀತಿ ಸಹವಾಸಗಳಿಂದ ನಿರೀಕ್ಷಿಸದ ದುರ್ಗುಣಗಳನ್ನೂ ಹೊಂದುವ ಸಾಧ್ಯತೆಯೂ ಇಲ್ಲದಿಲ್ಲವೆಂದಲ್ಲ.. ಆದರೆ ಅದಕ್ಕೆ ವಿವೇಚನಾಶಕ್ತಿಯನ್ನು ಉಪಯೋಗಿಸಿಕೊಳ್ಳಬೇಕು. ಒಳಿತೆಂದಾದರೆ ಮಾತ್ರ ಮಾಡುವುದೊಳಿತು.

ಸಂಕಟ ಬಂದಾಗ ಮಾತ್ರ ವೆಂಕಟರಮಣನ ಧ್ಯಾನ ಮಾಡುವುದಕ್ಕಿಂತಲೂ ,ದಿನದಿನವೂ ಆತನ ಧ್ಯಾನವನ್ನು ಮಾಡುತ್ತಿದ್ದರೆ ಕಷ್ಟ ಬಾರದಂತೆ ತಡೆಯಬಹುದು ಅಥವಾ ಕಷ್ಟವನ್ನೆದುರಿಸುವ ಶಕ್ತಿಯನ್ನು ಪಡೆದುಕೊಳ್ಳಬಹುದು. ಕುದುರೆಯನ್ನು ಗಾಡಿಗೆ ಕಟ್ಟುವಾಗ ,ಅದರ ದೃಷ್ಟಿ ಆಚೀಚೆ ಹೋಗಬಾರದೆಂದು ಅದರ ಕಣ್ಣಿನ ಎರಡೂ ಬದಿಗೆ ಪಟ್ಟಿಯನ್ನು ಕಟ್ಟುತ್ತಾರೆ. ಅದರ ದೃಷ್ಟಿಯು ನೇರವಾಗಿದ್ದರೆ ದಾರಿಯು ನೇರವಾಗಿ ಹಾಗೂ ಸರಾಗವಾಗಿ ಸಾಗುತ್ತದೆ. ಅದೇ ರೀತಿ ನಮ್ಮೊಳಗಿನ ಮನಸ್ಸನ್ನು ಕುಲುಕಿ ಕದಲಿಸದಂತೆ ಜ್ಞಾನದ ಪಟ್ಟಿಯನ್ನು ಕಟ್ಟಿರಬೇಕಾಗುತ್ತದೆ. ಆಗ ಎಲ್ಲೆ ಮೀರಿ ಹೋಗುವ ಸಂಭವವಿರುವುದಿಲ್ಲ.

ಧುಸ್ವಭಾವದವರು ಕೆಲವೊಮ್ಮೆ ಇತರರ ದರ್ಪಕ್ಕೆ ಸದಾ ಅಂಜುತ್ತಲೇ ಈ ಬದುಕು ನಡೆಸುತ್ತಿರುತ್ತಾರೆ. ಆದರೆ ಸದಾ ಒಳಿತು ಬಯಸುವ ಮನಸ್ಸುಳ್ಳವರು ಎಂದಿಗೂ ಇತರರಿಗೆ ಹೆದರುವ ಅವಶ್ಯಕತೆ ಇರುವುದಿಲ್ಲ. ಸೃಷ್ಟಿಕರ್ತಗೆ ವಿಧೇಯರಾಗಿರಬೇಕಾದ್ದು ಆದ್ಯ ಕರ್ತವ್ಯ. ಸಮಸ್ಯೆಗಳು ಬಂದಾಗ ದೇವರಲ್ಲಿ ವಿಶ್ವಾಸವಿಡಬೇಕು. ಪರಿಹಾರದ ಮಾರ್ಗವನ್ನು ಆತನೇ ಒದಗಿಸುತ್ತಾನೆ. ಪ್ರಶ್ನೆಗಳಿಗೆ ಉತ್ತರ ಆ ದೇವರು ನೀಡುತ್ತಾನೆ. ಇಂದು ಸಿಕ್ಕಿಲ್ಲವೆಂದರೂ ಹತಾಶೆ ಬೇಡ. ನಾಳೆಯೆಂಬುದು ಉತ್ತರ. ಆ ನಿರೀಕ್ಷೆಯಿಂದ ಬಾಳುವುದು ಒಳಿತು.

ಬೀಸೋ ದೊಣ್ಣೆ ತಪ್ಪಿಸಿಕೊಂಡೆವೆಂದಾದರೆ ಸಾವಿರ ಆನೆಯ ಬಲವೂ ಬರುವಂತಹ ಸಂದರ್ಭಗಳೂ ಇವೆ. ಹೊಡೆತದ ಪೆಟ್ಟಿನ ನೆನಪು ಸದಾ ಇದ್ದರೂ ಕಾಲ ಕಳೆದ ಹಾಗೇ ಮಾಗಿಹೋಗುತ್ತದೆ. ಆದರೆ ಮನಸ್ಸಿಗಾಗುವ ಹೊಡೆತವೆಂಬುದು ಚಂಡಮಾರುತ ಬೀಸಿದಂತೆ. ಅದು ಮರೆತುಹೋಗುವಂತಹದ್ದಲ್ಲ. ಹಾಗೂ ಅದು ಕಾಲಪ್ರವಾಹದಲ್ಲಿ ಕರಗಿಹೋಗುವ ಸಂಭವವೂ ಕಡಿಮೆ. ಹಾಗಾಗಿ ಯಾವತ್ತೂ ಇನ್ನೊಬ್ಬರ ಬಗ್ಗೆ ಆಡುವ ಪ್ರತಿ ಮಾತಿನ ಬಗ್ಗೆ ನಿಗಾ ಇಟ್ಟು ಕೊಳ್ಳಬೇಕು.

ಅಷ್ಟಕ್ಕೂ ಇತರರ ಬಗ್ಗೆ ನಾವು ಯಾಕೆ ಕೆಟ್ಟದ್ದು ಮಾತಾಡಬೇಕು ಎಂಬ ಪ್ರಶ್ನೆ ಏಳುವುದು ಸಹಜ. ನಮ್ಮ ಬೆನ್ನನ್ನೇ ನಮಗೆ ನೋಡಲು ಸಾಧ್ಯವಿಲ್ಲ ಎಂದಾದ ಮೇಲೆ ಇನ್ನೊಬ್ಬರ ಬೆನ್ನ ಹಿಂದೆ ಮಾತಾಡುವಂತಹ ಅಪ್ರಾಮಾಣಿಕತೆ ನಮಗೆ ಯಾಕೋ? ಹುಟ್ಟಿಸಿದ ದೇವರೇ ನೋಡಿಕೊಳ್ಳುತ್ತಾನೆ ಎಂದು ಸುಮ್ಮನಿರುವುದು ಒಳಿತಲ್ಲವೇ? ನಾಲಿಗೆಯನ್ನು ಹರಿಯ ಬಿಡುವುದರಿಂದ ಯಾರೂ ಉದ್ಧಾರವಾಗುವುದಿಲ್ಲ. ಕೆಲವರಿಗೆ ಇತರರನ್ನು ಒಂದು ಮಾತಾದರೂ ಅನ್ನದೇ ಇದ್ದರೆ ತಿಂದನ್ನ ಮೈಗೆ ಹತ್ತದವರಂತೆ ಚಡಪಡಿಸುತ್ತಿರುತ್ತಾರೆ.

ಹೆಚ್ಚು ಮಾತಾಡಿ ತಲೆನೋವು ಬರಿಸಿಕೊಳ್ಳುವುದಕ್ಕಿಂತ ಮೌನವಾಗಿದ್ದು ಅಪ್ಪಟ ಬಂಗಾರದಂತಿದ್ದರೆ ಎಷ್ಟು ಚೆನ್ನ. ಮಾತು ಆದಷ್ಟು ಮಿತವಾಗಿರಬೇಕು. ಕೆಲವರು ಅಗತ್ಯವಿಲ್ಲದಿದ್ದರೂ ಮಾತು ಮಾತು ಮಾತು! ಕೇಳುವವರಿಗೆ ಪಾಪ, ಅಯ್ಯೋ ಕಿವಿ ತೂತು ಆಗಿಬಿಡುವಷ್ಟು ಕೊರೆಯುವ ವರಿರುತ್ತಾರೆ. ಕೆಲವರ ಮೌನವೆಂದರೆ ಒಂದು ಸಣ್ಣ ಸೂಜಿ ಬಿದ್ದರೂ ಕೇಳಿಸುವಂತಹುದು. ಧ್ಯಾನಕ್ಕೆ ಮೌನವೇ ಹಿತ. ಬರವಣಿಗೆಗೂ ಮೌನವೇ ಸ್ಫೂರ್ತಿ.ಯಾರಾದರೂ ಮಾತಾಡಿದಲ್ಲಿ ಅವರ ಯೋಚನಾಲಹರಿ ಕಡಿತಗೊಳ್ಳುತ್ತದೆ. ಬಳಿಕ ವಿಷಯಾಂತರವಾಗುತ್ತದೆ. ಆಗ ಬರವಣಿಗೆಯ ವಿಷಯಗಳಲ್ಲಿ ಏರುಪೇರುಗಳಾಗುತ್ತವೆ.

ಕಡಲಿನ ಅಲೆಗಳು ಉಕ್ಕೇರಿ ಬಂದಾಗ ನೋಡಲು ಸುಂದರ ಆದರೂ ಭಯ ಒಳಗೊಳಗೆ ಆಗುವಂತೆ ಅಡಚಣೆಯಿಂದಾಗಿ ಆದ ಅನಾನುಕೂಲಕ್ಕೆ ಕೆಲವೊಮ್ಮೆ ಪ್ರಳಯ ಕಾಲದ ರುದ್ರನಂತೆ ಕಾಣಿಸಿಕೊಳ್ಳಲೂಬಹುದು. ಸುರಾಸುರರು ಅಂದು ಸಾಗರ ಮಂಥನ ಮಾಡಿದಾಗ ಅಮೃತ ಸಿಕ್ಕಿದ್ದು ಕೊನೆಯಲ್ಲಿ . ಮೊದಲೆಲ್ಲ ಬಂದದ್ದು ವಿಷವೇ, ಕಡೆಗೆ ಒಲಿಯುವಳು ಲಕ್ಷ್ಮೀ. ಹೌದು ನವರಾತ್ರಿಯ ಸಮಯದಲ್ಲಿ ನವದೇವಿಯರ ಪ್ರತಿಷ್ಠಾಪನೆಯು ಎಲ್ಲರ ಮನಸ್ಸನ್ನು ಮಂಥನಗೊಳಿಸಿ, ಬಂದಂತಹ ಭೀಕರ ಕೊಳೆಯನ್ನು ಅಳಿಸಿಬಿಡಲಿ. ಇಡೀ ವಿಶ್ವಕುಲವು ನವದೇವಿಯರ ಕೈಂಕರ್ಯದಿಂದ ಒಳಿತು ಕಾಣಲೆಂದು ಒಮ್ಮನಸ್ಸಿನಿಂದ ಬೇಡುವುದೊಂದು ಮೌನಯುದ್ದವೇ ಸರಿ. ನೂರು ಮಾತುಗಳಲ್ಲಿ ಹೇಳಲಾಗದ್ದನ್ನು ಮೌನವು ಹೇಳಿಬಿಡುತ್ತದೆ. ಮೌನವೇ ಆಯುಧ ರಕ್ಷೆಯಾಗಿ ಕಂಟಕಗಳನ್ನು ನೀಗಿಸುವ ತ್ರಿಶೂಲವಾಗಿ ಉದ್ಧರಿಸಲಿ. ದುಷ್ಟ ಶಕ್ತಿಗಳನ್ನು ಸಂಹರಿಸಿ ಲೋಕಕ್ಕೆ ಸಮಾಪನಗೊಂಡ ನವರಾತ್ರಿ ಹಬ್ಬವು ಸನ್ಮಂಗಳವನ್ನುಂಟುಮಾಡಿದೆ ಎಂಬ ಭರವಸೆಯ ಜೀವನ ನಮ್ಮೆಲ್ಲರದಾಗಲಿ.

ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು
ಅಂಕಣಕಾರರು


- Advertisement -

Related news

error: Content is protected !!