




ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯತ್ ನೌಕರರ ಒಕ್ಕೂಟದ ನೇತೃತ್ವದಲ್ಲಿ ಮಂಗಳೂರಿನ ಜಿಲ್ಲಾ ಪಂಚಾಯತ್ ಕಛೇರಿ ಮುಂಬಾಗದಲ್ಲಿ ಐದನೇ ದಿನಕ್ಕೆ ಕಾಲಿಟ್ಟ ಪಂಚಾಯತ್ ನೌಕರರ ಹೋರಾಟ.
ಕಳೆದ ಮೂರು- ನಾಲ್ಕು ದಿನದಿಂದ ನಿರಂತರ ಹೋರಾಟ ನಡೆಯುತ್ತಿದ್ದು ಇದೀಗ ಐದನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯದಲ್ಲಿರುವ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು, ನೀರು ಸರಬರಾಜು ಸಿಬ್ಬಂದಿಗಳು, ಸ್ವಚ್ಛತಾ ಕಾರ್ಯಕರ್ತರ ಸಹಿತ ಇಡೀ ಪಂಚಾಯತಿಯ ಕಾರ್ಯಾಂಗ ಕೆಲಸವನ್ನು ಸ್ಥಗಿತಗೊಳಿಸಿ, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಪಂಚಾಯತ್‌ನ ಸಣ್ಣಪುಟ್ಟ ಕೆಲಸವು ಸಹ ಆಗದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.
ರಾಜ್ಯದ ಶೇ.68ರಿಂದ 70ರಷ್ಟು ಜನರಿಗೆ ಸ್ಥಳೀಯ ಸಂಸ್ಥೆಯಾಗಿರುವ ಗ್ರಾಮ ಪಂಚಾಯತ್‌ಗಳ ಮೂಲಕ ಶೇ.70ರಷ್ಟು ಸೇವೆಗಳನ್ನು ನೀಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾಮ ಪಂಚಾಯತ್‌ನ ಎಲ್ಲ ಪಂಚ ನೌಕರರಾದ ಪಿಡಿಒ, ಕರ ವಸೂಲಿಗಾರರು, ಜಲಗಾರರು, ಕಚೇರಿ ಸಹಾಯಕರು, ಸ್ವಚ್ಛತಾಗಾರರು ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರಕಾರ ಮತ್ತು ಇಲಾಖೆಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಎಲ್ಲ ಸಮಸ್ಯೆಗಳಿಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ ಎಂದು ಸರಕಾರ ಮತ್ತು ಇಲಾಖೆಯ ಧೋರಣೆಯನ್ನು ಖಂಡಿಸಿ ಹಾಗೂ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.