Thursday, April 25, 2024
spot_imgspot_img
spot_imgspot_img

ಮಂಗಳೂರು: ಕೈದಿಗಳ ಹೊಡೆದಾಟ; ಪೊಲೀಸ್‌ ಕಮಿಷನರ್‌, ಜೈಲರ್‌ ಹಾಗೂ ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ!

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ಬೆಳಗ್ಗೆ ವಿಚಾರಣಾ ಕೈದಿಗಳ ಹೊಡೆದಾಟದ ಬಳಿಕ ಜೈಲಿಗೆ ಪರಿಶೀಲನೆಗೆ ತೆರಳಿದ ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌, ಜೈಲರ್‌ ಹಾಗೂ ಸಿಬ್ಬಂದಿಗೆ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆತಂಕಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜೈಲ್‌ನಲ್ಲಿ ಬೆಳಗ್ಗೆ ಉಪಹಾರ ವಿತರಣೆ ಸಂದರ್ಭ ವಿಚಾರಣಾಧೀನ ಕೈದಿ ಸಮೀರ್‌ ಎಂಬಾತ ಇತರೆ ಕೈದಿಗಳಾದ ಅನ್ಸಾರ್‌ ಹಾಗೂ ಜೈನುದ್ದೀನ್‌ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭ ತಂಡಗಳ ಮಧ್ಯೆ ಮಾರಾಮಾರಿ ನಡೆದಿತ್ತು. ಇದು ಗಮನಕ್ಕೆ ಬಂದ ಕೂಡಲೇ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌, ಡಿಸಿಪಿ ಹರಿರಾಮ್‌ ಶಂಕರ್‌, ಬರ್ಕೆ ಠಾಣಾ ಇನ್‌ಸ್ಪೆಕ್ಟರ್‌ ಜ್ಯೋತಿರ್ಲಿಂಗ ಇವರ ತಂಡ ಜೈಲಿಗೆ ತೆರಳಿತ್ತು. ಪೊಲೀಸ್‌ ಕಮಿಷನರ್‌ ಮಫ್ತಿಯಲ್ಲೇ ಜೈಲಿಗೆ ತೆರಳಿದ್ದು, ಸೆಲ್‌ನ ಒಳಗೆ ಹೋಗಿ ಆರೋಪಿ ಸಮೀರ್‌ನನ್ನು ಪ್ರಶ್ನಿಸಿದ್ದಾರೆ.

ಈ ವೇಳೆ ಆರೋಪಿ ಸೇರಿದಂತೆ ಸುಮಾರು 15ಕ್ಕೂ ಅಧಿಕ ಮಂದಿಯ ತಂಡ ಏಕಾಏಕಿ ಮಾರಕಾಯುಧದಿಂದ ಪೊಲೀಸ್‌ ಕಮಿಷನರ್‌, ಜೈಲರ್‌ ಸೇರಿದಂತೆ ಮೂರು ಮಂದಿಯ ಮೇಲೆ ಹಲ್ಲೆ ನಡೆಸಿದೆ. ಏಕಾಏಕಿ ದಾಳಿಯಿಂದ ಆತಂಕಿತರಾದ ಅಧಿಕಾರಿಗಳು, ಪೊಲೀಸರು ಸೆಲ್‌ನಿಂದ ಹೊರಗೆ ಬಂದಿದ್ದಾರೆ. ಗಂಭೀರ ಹಲ್ಲೆಯಿಂದ ಪೊಲೀಸ್‌ ಕಮಿಷನರ್‌ ಅವರ ಮೂಗಿನಿಂದ ರಕ್ತ ಬಂದಿದ್ದು, ಅಂಗಿಯಲ್ಲೂ ರಕ್ತವಾಗಿತ್ತು.

ಹಲ್ಲೆಗೊಳಗಾದ ಕಮಿಷನರ್‌ ಅವರು ಕೂಡಲೇ ಸಿಬ್ಬಂದಿ ಮೂಲಕ ತನ್ನ ಯೂನಿಫಾರಂ ತರಿಸಿಕೊಂಡಿದ್ದಾರೆ. ಬಳಿಕ ಜೈಲ್‌ ಸೂಪರಿಂಡೆಂಟ್‌ ಕಚೇರಿಗೆ ತೆರಳಿ ಮುಖ ತೊಳೆದು ಸಮವಸ್ತ್ರವನ್ನು ಹಾಕಿ ಹೊರಬಂದಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಜೈಲರ್‌ ಚಂದನ್‌ ಪಾಟೀಲ್‌ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವರಣೆ ಕೇಳಿದ ಎಡಿಜಿಪಿ, ಆಯೋಗ: ಜೈಲಿನಲ್ಲಿ ನಡೆದ ದಾಂಧಲೆ, ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸುದ್ದಿಯಾಗುತ್ತಿದ್ದಂತೆ ರಾಜ್ಯ ಕಾನೂನು ಸುವ್ಯವಸ್ಥಾ ವಿಭಾಗದ ಎಡಿಜಿಪಿ ಮತ್ತು ರಾಜ್ಯ ಬಂಧೀಖಾನೆ ವಿಭಾಗದ ಎಡಿಜಿಪಿಯವರು ಘಟನೆಯ ವರದಿ ಕೇಳಿದ್ದಾರೆ. ಇದು ಮಾತ್ರವಲ್ಲದೆ ಕಮಿಷನರ್‌ ಅವರಿಗೆ ಮಾನವ ಹಕ್ಕು ಆಯೋಗದ ಸದಸ್ಯರು ಕರೆ ಮಾಡಿ ಘಟನೆಯ ವಿವರ ಕೇಳಿದ್ದಾರೆ. ಆಸ್ಪತ್ರೆಯಲ್ಲಿ ಸಣ್ಣಪುಟ್ಟಚಿಕಿತ್ಸೆ ಪಡೆದ ಬಳಿಕ ಪೊಲೀಸ್‌ ಕಮಿಷನರ್‌ ಅವರು ಕೂಡಲೇ ಕರ್ತವ್ಯಕ್ಕೆ ಹಾಜರಾಗಿದ್ದರು.

- Advertisement -

Related news

error: Content is protected !!