

ಮಂಗಳೂರು: ಏಳು ದಿನಗಳ ಕಾಲ ನಿರಂತರ ನೃತ್ಯದೊಂದಿಗೆ 170 ಗಂಟೆ ಸತತ ಭರತನಾಟ್ಯ ಪ್ರದರ್ಶನ ನೀಡಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿನಿ ರೆಮೋನಾ ಪಿರೇರಾ ವಿಶ್ವದಾಖಲೆ ಬರೆದಿದ್ದಾರೆ.

ಜು. 21ರಂದು ಬೆಳಗ್ಗೆ 10.30ರಿಂದ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೆರಾ ಹಾಲ್‌ನಲ್ಲಿ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದ ರೆಮೋನಾ ಅವರು ಜು. 28ರ ವರೆಗೆ ನಿರಂತರವಾಗಿ ನಾಟ್ಯ ಪ್ರದರ್ಶನ ನೀಡಿದ್ದಾರೆ. ಭರತನಾಟ್ಯದ ವಿವಿಧ ಪ್ರಕಾರಗಳಾದ ಅಲೆರಿಪ್ಪು, ಜತಿಸ್ವರಂ, ಶಬ್ದಂ, ವರ್ಣಂ, ಪದಂ, ತಿಲ್ಲಾನಗಳ ಜತೆಗೆ ಸೆಮಿಕ್ಲಾಸಿಕ್, ದೇವರ ನಾಮಗಳಿಗೆ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. 61 ಪದ್ಯವನ್ನು 3 ಗಂಟೆಗಳಿಗೊಂದರಂತೆ ಜೋಡಿಸಲಾಗುತಿತ್ತು.
ರೆಮೋನಾ ಪಿರೇರಾ ರಾತ್ರಿ-ಹಗಲೆನ್ನದೆ ದಿನವಿಡೀ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಅವರು ಪ್ರತೀ ಮೂರು ಗಂಟೆಗೊಮ್ಮೆ 15 ನಿಮಿಷಗಳ ಕಾಲ ವಿರಾಮ ತೆಗೆದುಕೊಳ್ಳುತ್ತಿದ್ದರು. ಈ ಅವಧಿಯಲ್ಲಿ ಬಾಳೆಹಣ್ಣು, ಮೊಸರು, ಎಳನೀರು, ಅತೀ ಹೆಚ್ಚಾಗಿ ಬೇಯಿಸಿದ ಬೆಳ್ತಿಗೆ ಅನ್ನವನ್ನು ಸೇವಿಸುತ್ತಿದ್ದರು. ಇನ್ನು ಇದಕ್ಕೆಂದು ಆಹಾರ ಕ್ರಮವನ್ನು ಹಲವು ತಿಂಗಳುಗಳಿಂದ ಅಭ್ಯಸಿಸುತ್ತಿದ್ದರು.
ರೆಮೋನಾ ಪಿರೇರಾ ಅವರು ಮೂರು ವರ್ಷದ ಬಾಲಕಿಯಾಗಿದ್ದಾಗಲೇ ಭರತ ನಾಟ್ಯ ಕಲಿಕೆ ಆರಂಭಿಸಿದ್ದರು. ಕಳೆದ 13 ವರ್ಷಗಳಿಂದ ಯೆಯ್ನಾಡಿ ಸೌರಭ ಕಲಾಪರಿಷತ್ತಿನ ಡಾ| ಶ್ರೀವಿದ್ಯಾ ಅವರಲ್ಲಿ ಭರತನಾಟ್ಯ ಕಲಿಯುತ್ತಿದ್ದಾರೆ. 2019ರಲ್ಲಿ ರೆಮೋನಾ ಪಿರೇರಾ ಅವರು ರಂಗಪ್ರವೇಶ ಮಾಡಿದ್ದಾರೆ. ವಿದ್ಯೆಯ ಜೊತೆ ಭರತನಾಟ್ಯಕ್ಕೂ ಸಮಾನ ಪ್ರಾಶಸ್ತ್ಯ ನೀಡುತ್ತಿದ್ದ ಅವರು, ಯಕ್ಷಗಾನ, ಪಾಶ್ಚಾತ್ಯ, ಸಮಕಾಲೀನ ನೃತ್ಯಗಳು, ಸಾಹಸ ನೃತ್ಯವನ್ನು ಸಹ ಮಾಡುತ್ತಾರೆ. ಸಾವಿರಕ್ಕೂ ಅಧಿಕ ವೇದಿಕೆಗಳಲ್ಲಿ ರೆಮೋನಾ ಪಿರೇರಾ ಅವರು ನಾಟ್ಯ ಪ್ರದರ್ಶನ ನೀಡಿದ್ದಾರೆ. ಸದ್ಯ ಅವರು ಭರತನಾಟ್ಯದಲ್ಲಿ ವಿದ್ವತ್ ತಯಾರಿಯಲ್ಲಿದ್ದಾರೆ.
ಇನ್ನು ರೆಮೋನಾ ಅವರು ವಿಶ್ವದಾಖಲೆ ನಿರ್ಮಿಸಲು ಪ್ರತೀ ದಿನ ಸುಮಾರು 5ರಿಂದ 6 ಗಂಟೆಗಳ ಕಾಲ ಭರತನಾಟ್ಯ ಅಭ್ಯಸಿಸುತ್ತಿದ್ದರು. ಬೆಳಗ್ಗೆ 6 ಗಂಟೆಯಿಂದ 7.30ರವರೆಗೆ ಅಭ್ಯಾಸ ಮಾಡಿ ಕಾಲೇಜಿಗೆ ತೆರಳುತ್ತಿದ್ದರು. ಬಳಿಕ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮತ್ತೆ ಅಭ್ಯಾಸ ಮಾಡುತ್ತಿದ್ದರು.

ಮಂಗಳೂರು ನಗರದ ಗ್ಲಾಡಿಸ್ ಪಿರೇರಾ ಅವರ ಪುತ್ರಿಯಾಗಿರುವ ರೆಮೋನಾ ಭರತನಾಟ್ಯದಲ್ಲಿ 2017ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್, 2017ರಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್- ಲಂಡನ್, 2017ರಲ್ಲಿ ಭಾರತ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಹೆಸರು ನಮೂದಿಸಿದ್ದಾರೆ. ಕೇಂದ್ರ ಸರ್ಕಾರ ನೀಡುವ ಪ್ರಧಾನಮಂತ್ರಿ ಅತ್ಯುನ್ನತ ಬಾಲ ಪುರಸ್ಕಾರ ಹಾಗೂ ರಾಜ್ಯ ಸರ್ಕಾರ ನೀಡುವ ಬಾಲಗೌರವ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ರೆಮೋನಾ ಅವರ ಕಠಿಣ ಪರಿಶ್ರಮ ಹಾಗೂ ದೃಢ ನಿಶ್ಚಯದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ರೆಮೋನಾರ 170 ಗಂಟೆಗಳ ನೃತ್ಯ ಪ್ರದರ್ಶನ ಮುಗಿಯುತ್ತಿದ್ದಂತೆ ಅವರ ಪೋಷಕರು, ಶಿಕ್ಷಕರು ಮತ್ತು ಹಿತೈಷಿಗಳು ಸೇರಿದಂತೆ ಪ್ರೇಕ್ಷಕರು ಸಂಭ್ರಮಿಸಿದರು. ಇನ್ನು ರೆಮೋನಾರ ನೃತ್ಯ ಪ್ರದರ್ಶನದ ವೇಳೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಮಂಗಳೂರಿನ ಬಿಷಪ್, ಕಾರ್ಪೊರೇಟರ್‌ಗಳು ಸೇರಿದಂತೆ ಹಲವಾರು ಗಣ್ಯರು ಸ್ಥಳಕ್ಕೆ ಭೇಟಿ ನೀಡಿ ಅವರ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದ್ದರು.








