




ಮಂಗಳೂರು: ತಮಿಳುನಾಡಿನ ನಾಗರಕೋಯಿಲ್ ನಿಂದ ಮಂಗಳೂರಿಗೆ ‘ಅಮೃತ್ ಭಾರತ್ ಎಕ್ಸ್ ಪ್ರೆಸ್’ ಆರಂಭಿಸಲು ರೈಲ್ವೇ ಇಲಾಖೆ ಚಿಂತನೆ ಮಾಡಿದ್ದು, ಈ ರೈಲು ಆರಂಭಗೊಂಡರೆ ಮಂಗಳೂರಿಗೆ ಮೊದಲ ಅಮೃತ ಭಾರತ್ ಎಕ್ಸ್ ಪ್ರೆಸ್ ಲಭ್ಯವಾಗಲಿದೆ. ಈ ಪ್ರಸ್ತಾವಿತ ರೈಲಿನ ಸೇವೆಯನ್ನು ಮಂಗಳೂರು ತನಕ ಮಾತ್ರ ಸೀಮಿತಗೊಳಿಸಿದೆ, ಸುಬ್ರಹ್ಮಣ್ಯ ರೋಡ್ ಅಥವಾ ಕಬಕ ಪುತ್ತೂರು ತನಕ ವಿಸ್ತರಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಈ ರೈಲು ಸುಬ್ರಹ್ಮಣ್ಯ ತನಕ ಓಡಿಸಿದರೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುವ ಭಕ್ತರಿಗೆ ಪ್ರಯೋಜನವಾಗಲಿದೆ.
ಪ್ರಸ್ತುತ ಸುಬ್ರಹ್ಮಣ್ಯದಿಂದ ತಿರುವನಂತಪುರ ಮತ್ತು ದಕ್ಷಿಣ ಕೇರಳದ ಕಡೆಗೆ ಯಾವುದೇ ನೇರ ರೈಲು ಸಂಪರ್ಕವಿಲ್ಲ. ಕೇರಳ ಭಾಗಕ್ಕೆ ಬೆಂಗಳೂರು- ಕಣ್ಣೂರು ರೈಲು ಮಾತ್ರವೇ ಸುಬ್ರಹ್ಮಣ್ಯ ರೋಡ್ ಮೂಲಕ ಸಂಚರಿಸುತ್ತಿದೆ.ಹಾಗಾಗಿ ನಾಗರಕೋಯಿಲ್-ಮಂಗಳೂರು ಅಮೃತ್ ಭಾರತ್‌ಎಕ್ಸ್ಪ್ರೆಸ್ ರೈಲನ್ನು ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಿಸ ಬೇಕು. ಈ ಬಗ್ಗೆ ಕೇಂದ್ರ ರೈಲ್ವೇ ಸಚಿವರು, ಸಂಸದರ ಗಮನ ಸೆಳೆಯಲಾಗಿದೆ ಎಂದು ರೈಲ್ವೆ ಬಳಕೆದಾರರ ಸಂಘದವರು ಮಾಹಿತಿ ನೀಡಿದ್ದಾರೆ.








