

ಮಂಗಳೂರು: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುವ ಆಮಿಷವೊಡ್ಡಿ ಸುಮಾರು 70 ಲ.ರೂ. ವಂಚಿಸಿದ ಕುರಿತು ಮಂಗಳೂರಿನ ವ್ಯಕ್ತಿಯೊಬ್ಬರು ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ‘ರೈಸೆನ್’ ಎನ್ನುವ ಹೆಸರಿನಿಂದ ಪರಿಚಯಿಸಿಕೊಂಡು ತಾನು ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡುತ್ತಿದ್ದು, ಅದರಲ್ಲಿ ಸದಸ್ಯರಾಗುವಂತೆ ಸೂಚಿಸಿದ್ದ. ಹೆಚ್ಚಿನ ಲಾಭಾಂಶ ನೀಡುವುದಾಗಿ ಹಾಗೂ ಲಾಭಾಂಶಕ್ಕೆ ಶೇ. 30ರಷ್ಟು ಕಮಿಷನ್ ನೀಡಬೇಕು ಎಂದು ತಿಳಿಸಿದ್ದ. ಅದರಂತೆ ಪ್ರತಿದಿನ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಬಹುದು ಎಂದು ತಿಳಿಸಿದಂತೆ ತಾನು ಫೆ.2ರಿಂದ 23ರವರೆಗೆ ಹಂತ ಹಂತವಾಗಿ ವಿವಿಧ ಖಾತೆಗಳಿಂದ 62,92,726 ರೂ. ಹಣವನ್ನು ಹೂಡಿಕೆ ಮಾಡಿದ್ದೆ ಎಂದು ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಆತ ನಾನಾ ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದ. ಅನುಮಾನ ಬಂದು ಸ್ನೇಹಿತರ ಗಮನಕ್ಕೆ ತಂದಾಗ ತಾನು ಮೋಸ ಹೋಗಿರುವುದು ಅರಿವಾಯಿತು. ಹಾಗಾಗಿ ಮೋಸದಿಂದ ಹೂಡಿಕೆ ಮಾಡಿಸಿಕೊಂಡ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೇಳಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.