


ಮಂಗಳೂರು: 2015ರಲ್ಲಿ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿ ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಚುಂಕಿ ಆಕಾಶಭವನ @ ಸಂತೋಷ್ ಎಸ್(34) ಎಂದು ಗುರುತಿಸಲಾಗಿದೆ.
2015ರಲ್ಲಿ ಮಂಗಳೂರು ನಗರದ ಆಕಾಶಭವನದಲ್ಲಿ ನಡೆದ ಮದುವೆಯ ಮದುರಂಗಿ ಶಾಸ್ತ್ರದ ಸಂದರ್ಭದಲ್ಲಿ ಅಶೋಕ ಕುಮಾರ ಕೊಟ್ಟಾರಿ ಹಾಗೂ ಆರೋಪಿ ಜಗ್ಗು ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಪ್ರಮುಖ ಆರೋಪಿ ಚುಂಕಿ ಸಂತೋಷ್, ರಂಜಿತ್, ಧನು, ಧೂಮ, ಸ್ವೀಟಿ @ ನರೇಶ್ ಮತ್ತು ಜಗ್ಗು ರವರ ಜೊತೆ ಸೇರಿ ಅಶೋಕ ಕುಮಾರ ಕೊಟ್ಟಾರಿ ಅವರಿಗೆ ತಲವಾರಿನಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದರು.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ IPC 307 ಅಡಿ ಕೊಲೆಯತ್ನ ಪ್ರಕರಣ Cr.No.135/2015 ದಾಖಲಾಗಿತ್ತು. ಪ್ರಕರಣ ದಾಖಲಾದ ದಿನದಿಂದಲೇ ಚುಂಕಿ ಸಂತೋಷ್ ದಸ್ತಗಿರಿಗೆ ಸಿಗದೇ ತಲೆಮರೆಸಿಕೊಂಡಿದ್ದ. ಮಾನ್ಯ ನ್ಯಾಯಾಲಯವು ಆತನ ವಿರುದ್ಧ LPC ವಾರಂಟ್ No.25/2025 ಹೊರಡಿಸಿತ್ತು.
ಆರೋಪಿಯ ಬಗ್ಗೆ ಯಾವುದೇ ಸುಳಿವು ಇಲ್ಲದೇ, ಬಹಳ ಸಮಯದಿಂದ ಮಾಹಿತಿ ಸಂಗ್ರಹಿಸುತ್ತಿದ್ದ ಸಿಸಿಬಿ ಪೊಲೀಸರಿಗೆ, ಆರೋಪಿ ಶಿವಮೊಗ್ಗದಲ್ಲಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಜು. 29 ರಂದು ಹಾವೇರಿ ಜಿಲ್ಲೆಯ ಚಿಕ್ಕೆರೂರು ಎಂಬಲ್ಲಿ ಆರೋಪಿಯನ್ನು ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.








