


ಮಂಗಳೂರು: ಎಂಆರ್‌ಪಿಎಲ್‌ನ ಕೋಕರ್ ಹೈಡೋಟ್ರೇಟರ್ ಯುನಿಟ್ (ಸಿಎಚ್‌ಟಿಯು)ನಲ್ಲಿ ಬುಧವಾರ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಮನೀಶ್ ಕರ್ಕಡ (23) ಅವರ ಕುಟುಂಬಕ್ಕೆ ಒಟ್ಟು 1.20 ಕೋಟಿ ರೂ. ಮೊತ್ತದ ಪರಿಹಾರವನ್ನು ನೀಡುವುದಾಗಿ ಎಂಆರ್‌ಪಿಎಲ್ ಪ್ರಕಟನೆ ತಿಳಿಸಿದೆ.
ಮನೀಶ್ ಕರ್ಕಡ ಸಾವಿಗೆ ಸಂತಾಪ ಸೂಚಿಸುವುದಾಗಿ ಹೇಳಿರುವ ಎಂಆರ್‌ಪಿಎಲ್ ಆಡಳಿತ ಮಂಡಳಿ, ಅವರ ಕುಟುಂಬದ ಕಷ್ಟದ ಸಂದರ್ಭದಲ್ಲಿ ಕುಟುಂಬದೊಂದಿಗೆ ಇರುವುದಾಗಿ ಹೇಳಿದೆ.
ಅಮೂಲ್ಯವಾದ ಜೀವದ ನಷ್ಟವನ್ನು ಯಾವುದೇ ಆರ್ಥಿಕ ನೆರವಿನಿಂದ ಭರಿಸಲು ಸಾಧ್ಯವಿಲ್ಲವಾದರೂ, ಮೃತರ ಕುಟುಂಬಕ್ಕೆ ಎಂಆರ್‌ಪಿಎಲ್‌ನಿಂದ 90 ಲಕ್ಷ ರೂ. ಆರ್ಥಿಕ ನೆರವು ಜತೆಗೆ ಗ್ರೂಪ್ ಟರ್ಮ್ ಲೈಫ್ ಇನ್ಸೂರೆನ್ಸ್‌ನಡಿ 10 ಲಕ್ಷ ರೂ. ಹಾಗೂ ವರ್ಕ್‌ಮೆನ್ ಕಾಂಪೆನ್ಸೆಷನ್ ಪಾಲಿಸಿ ಅಡಿಯಲ್ಲಿ ಸುಮಾರು 20 ಲಕ್ಷ ರೂ. ಸೇರಿದಂತೆ ಒಟ್ಟು ಸುಮಾರು 1.20 ಕೋಟಿ ರೂ. ಪರಿಹಾರವನ್ನು ಒದಗಿಸಲಿದೆ.
ಗುತ್ತಿಗೆ ಆಧಾರಡಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಮೆಡಿಕೇಮ್ ವಿಮೆ ಒದಗಿಸುವ ಕುರಿತು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದ್ದು, ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ದಕ್ಷಿಣ ಕನ್ನಡ ಲೋಕಸಭಾ ಸಂಸದರು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿದ ಬಳಿಕ ಈ ವ್ಯವಸ್ಥೆಯನ್ನು ಅಂತಿಮಗೊಳಿಸಲಾಗುವುದು. ಪ್ರಸ್ತಾವಿತ ಮೆಡಿಕೇಮ್ ವ್ಯವಸ್ಥೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಸುಮಾರು ನಾಲ್ಕು ವಾರಗಳೊಳಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಎಂಆರ್‌ಪಿಎಲ್ ಪ್ರಕಟನೆಯಲ್ಲಿ ತಿಳಿಸಿದೆ.
ಎಂಆರ್‌ಪಿಎಲ್ ತನ್ನ ಎಲ್ಲ ಸಿಬ್ಬಂದಿಯ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣಕ್ಕೆ ಬದ್ಧವಾಗಿದ್ದು, ಬಾಧಿತ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ಮುಂದುವರಿಸುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.








