Tuesday, July 1, 2025
spot_imgspot_img
spot_imgspot_img

ಮಂಗಳೂರು: ಕೊಲೆ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್..!

- Advertisement -
- Advertisement -

ಮಂಗಳೂರು: ಹಾಡುಹಗಲಿನಲ್ಲಿ ವ್ಯಕ್ತಿಯೋರ್ವರನ್ನು ಭೀಕರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮುಲ್ಕಿ ತಾಲೂಕಿನ ಪಕ್ಷಿಕೆರೆಯ ಕೆಮ್ರಾಲ್ ನಿವಾಸಿ ಆರೋಪಿ ಮೊಹಮ್ಮದ್ ಮುಸ್ತಫಾ ಯಾನೆ ಮುಸ್ತಾ ಎಂದು ಗುರುತಿಸಲಾಗಿದೆ.

2020 ನೇ ಸಾಲಿನಲ್ಲಿ ಮುಲ್ಕಿ ವಿಜಯ ಸನ್ನಿದಿ ಹೆದ್ದಾರಿ ಬಳಿ ಹಾಡುಹಗಲಿನಲ್ಲಿ ಭೀಕರವಾಗಿ ವ್ಯಕ್ತಿಯೋರ್ವರನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಜಾಮೀನು ರದ್ದಾದ ಬಳಿಕ ಆರೋಪಿ ಮೊಹಮ್ಮದ್ ಮುಸ್ತಫಾ ನಕಲಿ ಪಾಸ್‌ಪೋರ್ಟ್ ಬಳಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ. ಬಳಿಕ 2024 ರ ಎಪ್ರಿಲ್ ತಿಂಗಳಿನಲ್ಲಿ ಆರೋಪಿಯು ಅಕ್ರಮವಾಗಿ ಓಮನ್ ದೇಶದಿಂದ ಭಾರತಕ್ಕೆ ನೇಪಾಳದ ಮೂಲಕ ಅಕ್ರಮ ಪ್ರವೇಶಿಸಿದ್ದ.

ಆರೋಪಿಯ ವಿರುದ್ಧ ಸುಮಾರು ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಕೊಲೆ ಪ್ರಕರಣದಲ್ಲಿ ವಾರಂಟಿನಿಂದ ತಪ್ಪಿಸಿಕೊಂಡು ವಿಚಾರಣೆಗೆ ಹಾಜರಾಗದೇ ನುಣುಚಿಕೊಳ್ಳುತ್ತಿದ್ದ ಬಗ್ಗೆ ಹಾಗೂ ಅಕ್ರಮವಾಗಿ ವಿದೇಶ ಮತ್ತು ಭಾರತಕ್ಕೆ ಬಂದಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

ಇದೀಗ ಪರಾರಿಯಾಗಿದ್ದ ಆರೋಪಿ ಮೊಹಮ್ಮದ್ ಮುಸ್ತಫಾನನ್ನು ವಿಶೇಷ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮತ್ತೆ ನ್ಯಾಯಾಂಗ ಅಭಿರಕ್ಷೆಗೆ ನೀಡಲಾಯಿತು.

2020ರ ಜೂನ್ 5ರಂದು ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಲ್ಕಿ ವಿಜಯ ಸನ್ನಿದಿ ಹೆದ್ದಾರಿ ಬಳಿ ಹಾಡುಹಗಲಿನಲ್ಲಿ ರಸ್ತೆಯಲ್ಲಿ ಅಬ್ದುಲ್ ಲತೀಫ್ ಎಂಬವನನ್ನು ಆರೋಪಿಗಳಾದ ದಾವೂದ್ ಹಕೀಂ, ಮೊಹಮ್ಮದ್ ಮುಸ್ತಾಫ ಮತ್ತು ಇತರರು ಒಟ್ಟು 10 ಜನ ಸೇರಿ ಕೊಲೆ ಮಾಡಿದ್ದರು. ಎಲ್ಲಾ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುತ್ತದೆ. ಹಾಲಿ ನ್ಯಾಯಾಲಯದ ವಿಚಾರಣಾ ಹಂತದಲ್ಲಿರುತ್ತದೆ.

ಈ ಮಧ್ಯೆ ಆರೋಪಿ ಮೊಹಮ್ಮದ್ ಮುಸ್ತಫಾ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಿನಾಂಕ 2020ರ ಅಕ್ಟೋಬರ್ 19ರಂದು ಜಾಮೀನು ಪಡೆದಿರುತ್ತಾನೆ. ನಂತರ 2022ರ ಏಪ್ರಿಲ್ 22ರಂದು ನ್ಯಾಯಾಲಯವು ಆರೋಪಿಯ ಜಾಮೀನು ರದ್ದು ಮಾಡಿರುತ್ತದೆ. ಅಂದಿನಿಂದಲೂ ಆರೋಪಿ ಮೊಹಮ್ಮದ್ ಮುಸ್ತಫಾನು ತಲೆಮರೆಸಿಕೊಂಡು ನಕಲಿ ಪಾಸ್‌ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದನು.

ತಲೆಮರೆಸಿಕೊಂಡ ವಾರಂಟ್ ಆರೋಪಿ ಮೊಹಮ್ಮದ್ ಮುಸ್ತಫಾನ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಇದೀಗ ಆರೋಪಿಯನ್ನು 2025ರ ಜೂನ್ 30ರಂದು ಮುಲ್ಕಿಯ ಪಕ್ಷಿಕೆರೆ ಬಳಿ ಪತ್ತೆ ಮಾಡಿ ಮುಂದಿನ ಕ್ರಮದ ಬಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ವಿಚಾರಣೆ ವೇಳೆ ಆರೋಪಿಯು ನಕಲಿ ಪಾಸ್‌ಪೋರ್ಟ್ ಪಡೆದು ಓಮನ್ ರಾಷ್ಟ್ರಕ್ಕೆ ಪರಾರಿಯಾಗಿ ನಂತರ ನೇಪಾಳ ಮೂಲಕ ಭಾರತ ದೇಶಕ್ಕೆ ಬಂದಿರುವುದಾಗಿ ತಿಳಿದುಬಂದಿದೆ.

ಆರೋಪಿಯು ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಈತನ ವಿರುದ್ದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬಗ್ಗೆ ಮತ್ತು ವಿದೇಶ ಮತ್ತು ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ ಪ್ರಕರಣವನ್ನು ಮುಲ್ಕಿ ಠಾಣೆಯಲ್ಲಿ ದಾಖಲಿಸಿಕೊಂಡಿರುತ್ತದೆ. ನಕಲಿ ಪಾಸ್‌ಪೋರ್ಟ್ ಹೊಂದಿರುವ ಬಗ್ಗೆ ಬೆಂಗಳೂರಿನ ಬಸನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈತನ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ 4 ಮತ್ತು ಇತರೆ ಜಿಲ್ಲೆಯಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿರುತ್ತದೆ. ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಠಾಣೆಗಳಲ್ಲಿ ಈತನ ವಿರುದ್ಧ ಎರಡು ಪ್ರಕರಣಗಳಲ್ಲಿ ವಾರಂಟ್ ಬಾಕಿ ಇರುತ್ತದೆ.

- Advertisement -

Related news

error: Content is protected !!