


ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅ.ಕ್ರ. 130/2025 ಪ್ರಕರಣದ ಆರೋಪಿಗೆ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-2, ಮಂಗಳೂರು ನ್ಯಾಯಾಧೀಶರಾದ ಮಾನು ಕೆ.ಎಸ್ ಅವರು 20 ವರ್ಷ ಕಠಿಣ ಕಾರಾಗೃಹ ಮತ್ತು 65,000 ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ಸಾರಾಂಶದ ಪ್ರಕಾರ, ಕುಂಜತ್ತ ಬೈಲ್ ನಿವಾಸಿ ಸೋನು ಮ್ಯಾಕ್ಲಿನ್ ನೊರೊನ್ಹ(20) ಎಂಬಾತನು 2024ರ ಫೆಬ್ರವರಿಯಿಂದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮನವೊಲಿಸಿದ್ದಾನೆ. ಬಳಿಕ 2024ರ ಸೆಪ್ಟೆಂಬರ್ ತಿಂಗಳಿನಲ್ಲಿ ಶಕ್ತಿ ನಗರದ ಚಾಲುಕ್ಯ ಬಾರ್ ಬಳಿಯ ಮನೆಯಲ್ಲಿ ಮತ್ತು 2024ರ ನವೆಂಬರ್ ನಿಂದ 2025ರ ಜೂನ್ ಮಧ್ಯೆ ಅಳಪೆ ಗ್ರಾಮದ ಕೆಂಬಾರು ಕೆ.ಇ.ಬಿ. ಮುಂಭಾಗದ ಮನೆಯಲ್ಲಿ ಪದೇ ಪದೇ ಅತ್ಯಾಚಾರ ನಡೆಸಿದ್ದಾನೆ.
ಇದಲ್ಲದೆ ಅಪ್ರಾಪ್ತ ಬಾಲಕಿ ಸ್ನಾನಗೃಹದಲ್ಲಿ ನಗ್ನ ಸ್ಥಿತಿಯಲ್ಲಿದ್ದಾಗ ವೀಡಿಯೋ ಕಾಲ್ ಮಾಡಿ, ಸ್ಕ್ರೀನ್ ಶಾಟ್ ತೆಗೆದು ನಗ್ನ ಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿಟ್ಟು, ದೈಹಿಕ ಸಂಪರ್ಕಕ್ಕೆ ಬಾರದಿದ್ದರೆ ಈ ಚಿತ್ರಗಳನ್ನು ವೈರಲ್ ಮಾಡುವುದಾಗಿ ಹಾಗೂ ಬಾಲಕಿ, ಆಕೆಯ ತಾಯಿ ಮತ್ತು ಅಕ್ಕನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ಆರೋಪಿಯ ವಿರುದ್ಧ ಕಲಂ 64(2)(m), 77 BNS 2023, ಕಲಂ 6, 15 ಪೋಕ್ಸೋ ಕಾಯ್ದೆ ಮತ್ತು ಕಲಂ 66(E) IT ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯವು ಆರೋಪಿಗೆ ಕಲಂ 6 ಪೋಕ್ಸೋ ಮತ್ತು ಕಲಂ 64 (2) (m) ಬಿ.ಎನ್.ಎಸ್ ಕಾಯ್ದೆಯಡಿ 20 ವರ್ಷ ಕಠಿಣ ಜೈಲುಶಿಕ್ಷೆ ಹಾಗೂ 50,000/- ರೂ ದಂಡ, ಕಲಂ 77 ಬಿ.ಎನ್.ಎಸ್ ಕಾಯ್ದೆಯಡಿ ಒಂದು ವರ್ಷ ಹಾಗೂ 5,000/- ರೂ ದಂಡ, ಕಲಂ 15 ಪೋಕ್ಸೋ ಕಾಯ್ದೆಯಡಿ ಒಂದು ವರ್ಷ ಹಾಗೂ 5,000/- ರೂ ದಂಡ, ಕಲಂ 66 (E) IT ಕಾಯ್ದೆಯಡಿ ಒಂದು ವರ್ಷ ಹಾಗೂ 5,000/- ರೂ ದಂಡ ವಿಧಿಸಿರುತ್ತಾರೆ.
ಈ ಪ್ರಕರಣವನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾಗಿದ್ದ ಟಿ.ಡಿ. ನಾಗರಾಜ್ ರವರು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಪ್ರಬಲ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ವಾದ ಮಂಡಿಸಿದ್ದರು.








