Monday, June 29, 2026
spot_imgspot_img
spot_imgspot_img

ಮಂಗಳೂರಿನಲ್ಲಿ ದರೋಡೆ:ಕೇರಳ ಉದ್ಯಮಿಯ ಕಾರು ಅಡ್ಡಗಟ್ಟಿ ಹೆಂಡತಿ-ಮಗನ ಅಪಹರಣ, ಚಿನ್ನಾಭರಣ ಲೂಟಿ

- Advertisement -
- Advertisement -

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಬಳಿ ಸೋಮವಾರ ಬೆಳಗ್ಗಿನ ಜಾವ ಭೀಕರ ಹಾಗೂ ಸಿನೆಮಾ ಶೈಲಿಯ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿದ 7-8 ಮಂದಿ ದರೋಡೆಕೋರರ ತಂಡ, ಉದ್ಯಮಿಯ ಪತ್ನಿ ಮತ್ತು ಮಗನನ್ನು ಕಾರು ಸಮೇತ ಅಪಹರಿಸಿ, ಚಿನ್ನಾಭರಣ ದೋಚಿ ಅವರನ್ನು ರಸ್ತೆಯಲ್ಲಿಯೇ ತೊರೆದು ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

ಕೇರಳದ ಪಯ್ಯನ್ನೂರು ನಿವಾಸಿ, ಉದ್ಯಮಿ ವಿಕಾಸ್ ದರೋಡೆಗೊಳಗಾದವರು. ಇವರು ತನ್ನ ಪತ್ನಿ ಮತ್ತು ಮಗನೊಂದಿಗೆ ಮುಂಬೈನಲ್ಲಿ ನಡೆದ ಸ್ನೇಹಿತರೊಬ್ಬರ ಮದುವೆ ಸಮಾರಂಭ ಮುಗಿಸಿ ಕಾರಿನಲ್ಲಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ.

ಸೋಮವಾರ ಬೆಳಗ್ಗಿನ ಜಾವ ಸುಮಾರು 2:30ರ ವೇಳೆಗೆ ವಿಕಾಸ್ ಅವರು ಚಲಾಯಿಸುತ್ತಿದ್ದ ಕಾರು ಬೈಕಂಪಾಡಿಯ ದ್ವಾರ ಹೋಟೆಲ್ ಬಳಿ ತಲುಪುತ್ತಿದ್ದಂತೆ, ಮೂರು ಕಾರುಗಳಲ್ಲಿ ಹಿಂಬಾಲಿಸಿಕೊಂಡು ಬಂದ 7 ರಿಂದ 8 ಮಂದಿ ದರೋಡೆಕೋರರು ವಿಕಾಸ್ ಅವರ ಕಾರನ್ನು ಬಲವಂತವಾಗಿ ಅಡ್ಡಗಟ್ಟಿದ್ದಾರೆ. ತಕ್ಷಣ ಕಾರಿನಿಂದ ವಿಕಾಸ್ ಅವರನ್ನು ಕೆಳಗಿಳಿಸಿದ ದುಷ್ಕರ್ಮಿಗಳು, ಕಾರಿನಲ್ಲಿದ್ದ ಅವರ ಪತ್ನಿ ಮತ್ತು ಮಗನನ್ನು ಕಾರು ಸಮೇತ ಅಪಹರಿಸಿಕೊಂಡು ಹೋಗಿದ್ದಾರೆ.

ಬಳಿಕ ಪಣಂಬೂರು ಬೀಚ್ ರಸ್ತೆ ಬಳಿ ಕಾರನ್ನು ನಿಲ್ಲಿಸಿದ ದರೋಡೆಕೋರರು, ವಿಕಾಸ್ ಅವರ ಪತ್ನಿ ಮತ್ತು ಮಗನ ಧರಿಸಿದ್ದ ಹಾಗೂ ಬ್ಯಾಗ್‌ಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಮತ್ತು ಇತರೆ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ನಂತರ ತಾಯಿ-ಮಗನನ್ನು ಅಸಹಾಯಕ ಸ್ಥಿತಿಯಲ್ಲಿ ರಸ್ತೆಯಲ್ಲೇ ಬಿಟ್ಟು, ಉದ್ಯಮಿಯ ಕಾರಿನೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ಉದ್ಯಮಿ ವಿಕಾಸ್ ಅವರು ತಕ್ಷಣ ಪಣಂಬೂರು ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಪೊಲೀಸರು, ದರೋಡೆಕೋರರ ಪತ್ತೆಗಾಗಿ ಜಾಲ ಬೀಸಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ನಡುರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರುಗಳನ್ನು ಅಡ್ಡಗಟ್ಟಿ, ಕುಟುಂಬ ಸಮೇತ ಅಪಹರಿಸಿ ದರೋಡೆ ನಡೆಸಿರುವ ಈ ಘಟನೆ ಕರಾವಳಿಯ ಜನತೆಯಲ್ಲಿ ತೀವ್ರ ಆತಂಕ ಮೂಡಿಸಿದೆ.

- Advertisement -

Related news

error: Content is protected !!