Sunday, July 19, 2026
spot_imgspot_img
spot_imgspot_img

ಮಂಗಳೂರು -ಸಿಸಿಬಿ ಪೊಲೀಸರ ಕಾರ್ಯಾಚರಣೆ : 5.20 ಕೋಟಿ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರ ಬಂಧನ

- Advertisement -
- Advertisement -

ಮಂಗಳೂರು: “ಡ್ರಗ್ಸ್ ಫ್ರಿ ಮಂಗಳೂರು” ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರಾಜಧಾನಿ ದೆಹಲಿಯಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸಿಕೊಂಡು ಬೆಂಗಳೂರಿಗೆ ಸಾಗಾಟ ಮಾಡುತ್ತಿರುವಾಗ  ಬೆಳ್ತಂಗಡಿ ಮೂಲದ ಇಬ್ಬರನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಬಂಧನ ಮಾಡಿ ಅವರಿಂದ ಬೃಹತ್ ಪ್ರಮಾಣದ 5 ಕೆಜಿ 196 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದ ಮಂಗಳೂರು ನಗರ ಸಿಸಿಬಿ ಪೊಲೀಸರು, ಮತ್ತೊಂದು ಮಹತ್ವದ ಕಾರ್ಯಾಚರಣೆಯಲ್ಲಿ ₹5.20 ಕೋಟಿ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.

ಈ ಪ್ರಕರಣದ ಹಿನ್ನೆಲೆ ದಿನಾಂಕ ಜೂನ್ 25ರಂದು ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಯಲ್ಲಿ ಮಾದಕ ವಸ್ತು ಹೊಂದಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಅಣ್ಣಪ್ಪ ಸ್ವಾಮಿ @ ಮನು ಎಂಬಾತನನ್ನು ಬಂಧಿಸಿ, ಆತನಿಂದ ₹1.50 ಲಕ್ಷ ಮೌಲ್ಯದ 15.17 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿತ್ತು.

ತನಿಖೆ ವೇಳೆ ಆರೋಪಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಡ್ರಗ್ ಪೆಡ್ಲರ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ತಂಡಕ್ಕೆ, ದೆಹಲಿಯಿಂದ ಎಂಡಿಎಂಎ ಖರೀದಿಸಿ ಬೆಂಗಳೂರಿನತ್ತ ಸಾಗುತ್ತಿದ್ದ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅದರಂತೆ ಜುಲೈ 15 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಯಲ್ ಇನ್ ಲಾಡ್ಜ್ ಮೇಲೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳು:

*ಮೊಹಮ್ಮದ್ ಅಲ್ಫಾಜ್ (28), ಇಂಡಬೆಟ್ಟು ಗ್ರಾಮ, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ.

*ಮೊಹಮ್ಮದ್ ಮುಸ್ತಾಫಾ (28), ಲಾಯಿಲಾ ಗ್ರಾಮ, ಉಜಿರೆ, ದಕ್ಷಿಣ ಕನ್ನಡ ಜಿಲ್ಲೆ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ ಒಟ್ಟು ₹5 ಕೋಟಿ 20 ಲಕ್ಷ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ, ಒಂದು ಬ್ಯಾಗ್ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಮೊಹಮ್ಮದ್ ಅಲ್ಫಾಜ್ ವಿರುದ್ಧ ಈ ಹಿಂದೆ 2024ರಲ್ಲಿ ಕೊಣಾಜೆ ಪೊಲೀಸ್ ಠಾಣೆ ಹಾಗೂ 2026ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಎಂಡಿಎಂಎ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.

ಈ ಪ್ರಕರಣದ ಕುರಿತು ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದ್ದು, ಮಾದಕ ವಸ್ತು ಜಾಲದ ಇನ್ನಷ್ಟು ಕೊಂಡಿಗಳನ್ನು ಪತ್ತೆಹಚ್ಚಲು ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!