




ಮಾಣಿ : ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ, ಬಂಟ್ವಾಳ ಮತ್ತು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ,ವಿದ್ಯಾನಗರ ಪೆರಾಜೆ, ಮಾಣಿ ಇವರ ಜಂಟಿ ಸಹಯೋಗದಿಂದ ಬಂಟ್ವಾಳ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯು ಸೆಪ್ಟೆಂಬರ್ 04 ರಂದು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರು ಹಾಗೂ ಸಂಸ್ಥೆಯ ಸಂಚಾಲಕರೂ ಆಗಿರುವ ಪ್ರಹ್ಲಾದ್ ಶೆಟ್ಟಿ ಜೆ “ವಿಜ್ಞಾನ ನಾಟಕ ಪ್ರದರ್ಶನವು ನಿಜ ಜೀವನದ ಸನ್ನಿವೇಶಗಳಿಗೆ ಪೂರಕವಾಗಿದೆ. ಸ್ಪರ್ಧೆಯಲ್ಲಿ ಪಾರದರ್ಶಕವಾಗಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಅಭಿವ್ಯಕ್ತಪಡಿಸಲು ಈ ವೇದಿಕೆಯನ್ನು ಬಳಸಿಕೊಂಡು, ಸ್ಪರ್ಧೆಯ ಯಶಸ್ಸಿಗೆ ಪಾತ್ರರಾಗಿ”ಎಂದು ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಎಂ ಜಿ ಯವರು”ಆಧುನಿಕ ಜಗತ್ತಿನ ಅದ್ಭುತವಾದ ಶಕ್ತಿಯೇ ವಿಜ್ಞಾನ. ವಿಜ್ಞಾನ ಮತ್ತು ಜೀವನ ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪುರಾತನ ಕಾಲದ ಜೀವನ ಶೈಲಿಯನ್ನು ಬದಲಾಯಿಸುವಲ್ಲಿ ಶಿಕ್ಷಣ ವ್ಯವಸ್ಥೆ ,ಆಹಾರ ಪದ್ಧತಿ ಹಾಗೂ ವಿಜ್ಞಾನದ ಸಮ್ಮಿಳಿತ ಗಣನೀಯವಾದ ಪಾತ್ರವನ್ನು ವಹಿಸುತ್ತದೆ .ವಿಜ್ಞಾನ ನಾಟಕವು ನೈಜ ಘಟನೆಯನ್ನು ಆಧರಿಸಿದ್ದಾಗಿದೆ ಎಂದರು. ಗ್ರಾಮೀಣ ಭಾಗದಲ್ಲಿನ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಹಿತದೃಷ್ಟಿಯಿಂದ ಸ್ಥಾಪಿತವಾದ ಬಾಲವಿಕಾಸ ಸಂಸ್ಥೆಯು ಸದಾ ಕ್ರೀಡಾ ಚಟುವಟಿಕೆ ,ಸಾಂಸ್ಕೃತಿಕ ಕಾರ್ಯಕ್ರಮಗಳು ,ಸ್ಥಳೀಯ ಹಬ್ಬಗಳಿಗೆ ಹೆಚ್ಚಿನ ಮಹತ್ವ ,ಬಡ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಶಿಕ್ಷಣವನ್ನು ನೀಡುತ್ತಾ, ಸಮಾಜಕ್ಕೆ ದೇಣಿಗೆಯಾಗಿ ನೀಡಿರುವ ಒಂದು ಮಾದರಿ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಪ್ರಸ್ತುತ ಸನ್ನಿವೇಶಕ್ಕೆ ಅನೂಕಲಕರವಾದ ರೀತಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಶಿಕ್ಷಣ ಕ್ಷೇತ್ರದಲ್ಲಿ ಬಳಸುತ್ತಿರುವ ರಾಜ್ಯದ ಅತ್ತ್ಯುತ್ತಮ ಶಾಲೆ “ಎಂದರು.
ಬಂಟ್ವಾಳ ತಾಲೂಕಿನ ಶಿಕ್ಷಣ ಸಂಯೋಜಕರು ಆಗಿರುವ ಪ್ರತಿಮಾ ವೈ ವಿ ಸ್ಪರ್ಧಾಳುಗಳಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ , ಮಾಣಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಸತೀಶ್ ರಾವ್, ಸ್ಪರ್ಧೆಯ ತೀರ್ಪುಗಾರರಾದ ಪರಮೇಶ್ವರ ಹೆಗಡೆ ಹಾಗೂ ಅರವಿಂದ ಕುಡ್ಲ ಉಪಸ್ಥಿತರಿದ್ದರು. ಸಂಸ್ಥೆಯ ವ್ಯವಸ್ಥಾಪಕಿ ನಯನಾ ಎಂ,ಪತ್ರಕರ್ತರಾದ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದು , ಅವುಗಳಲ್ಲಿ ಕ್ರಮವಾಗಿ ಎಸ್. ವಿ. ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ,ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆ ದ್ವಿತೀಯ ಹಾಗೂ ಸರಕಾರಿ ಪ್ರೌಢ ಶಾಲೆ ಸರಪಾಡಿ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ಸಂಸ್ಥೆಯ ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ ಸ್ವಾಗತಿಸಿ, ಶಿಕ್ಷಕಿ ಸುಧಾ ಎನ್ ರಾವ್ ವಂದಿಸಿದರು. ಸಹಶಿಕ್ಷಕಿ ಯಜ್ಞೇಶ್ವರಿ ಎನ್ ಕಾರ್ಯಕ್ರಮ ನಿರೂಪಿಸಿದರು.








