2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಶುರುವಾದಾಗಿನಿಂದ ಇಲ್ಲಿಯವರೆಗೆ ಸುಮಾರು 31 ಕೋಟಿ ರೂಪಾಯಿ (30,80,91,225)ಆದಾಯ ಗಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಈ ಕಾರ್ಯಕ್ರಮಕ್ಕಾಗಿ ರಾಷ್ಟ್ರೀಯ ಪ್ರಸಾರಕರು ಹೆಚ್ಚುವರಿ ಖರ್ಚು ಮಾಡಿಲ್ಲ, ಬದಲಾಗಿ ಆಂತರಿಕ ಸಂಪನ್ಮೂಲಗಳ ಸದುಪಯೋಗಪಡಿಸಿಕೊಂಡು ಮನ್ ಕೀ ಬಾತ್ ನಿರ್ಮಾಣ ಮಾಡಲಾಗಿದೆ ಎಂದೂ ಹೇಳಿದೆ.

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಸಿಂಗ್ ಠಾಕೂರ್, ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ದೂರದರ್ಶನ್ ಮತ್ತು ಆಲ್ ಇಂಡಿಯಾ ರೇಡಿಯೋದ ಹಲವು ಚಾನಲ್ಗಳಲ್ಲಿ ಪ್ರಸಾರವಾಗುತ್ತದೆ. 2014ರಿಂದ ಇಲ್ಲಿಯವರೆಗೆ ಪ್ರಸಾರ್ ಭಾರತಿ ತನ್ನ ಆಲ್ ಇಂಡಿಯಾ ರೇಡಿಯೋ, ದೂರದರ್ಶನ ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳ ಮೂಲಕ ಒಟ್ಟು 78 ಆವೃತ್ತಿಗಳನ್ನು ಪ್ರಸಾರ ಮಾಡಿದೆ. ಈಗಂತೂ 23 ಭಾಷೆ, 29 ಉಪಭಾಷೆಗಳಲ್ಲೂ ಮನ್ ಕೀ ಬಾತ್ ಪ್ರಸಾರವಾಗುತ್ತಿದೆ ಎಂದು ತಿಳಿಸಿದರು.

ಪ್ರಸಾರ ಭಾರತಿ ತನ್ನ ಹಿಂದಿ ಮತ್ತು ವಿವಿಧ ಭಾಷೆಗಳ ಡಿಡಿ ಚಾನೆಲ್ಗಳ ಮೂಲಕ ಮನ್ ಕೀ ಬಾತ್ನ ದೃಶ್ಯೀಕೃತ ಆವೃತ್ತಿಗಳನ್ನೂ ಪ್ರಸಾರ ಮಾಡುತ್ತಿದೆ. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನಗಳ ಹೊರತಾಗಿಯೂ ಈ ಕಾರ್ಯಕ್ರಮವನ್ನು ದೇಶದಲ್ಲಿ ಸುಮಾರು 91 ಖಾಸಗಿ ಸೆಟಲೈಟ್ ಟಿವಿ ಚಾನಲ್ಗಳು, ಕೇಬಲ್, ಡಿಟಿಎಚ್ ಪ್ಲ್ಯಾಟ್ಫಾರಂಗಳು ಪ್ರಸಾರ ಮಾಡುತ್ತಿವೆ.

ಅದರೊಂದಿಗೆ iOS, ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರು ನ್ಯೂಸ್ ಆನ್ ಏರ್ ಮೂಲಕ ಅಥವಾ ಪ್ರಸಾರ ಭಾರತಿಯ ಯೂಟ್ಯೂಬ್ ಚಾನಲ್ಗಳ ಮೂಲಕ ಮನ್ ಕೀ ಬಾತ್ ಕೇಳುತ್ತಿದ್ದಾರೆ ಎಂದು ಅನುರಾಗ್ ಠಾಕೂರ್ ಮಾಹಿತಿ ನೀಡಿದರು.

ಟಿವಿ ಚಾನೆಲ್ಗಳ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (BARC-ಬಾರ್ಕ್)ಯ ಡಾಟಾ ಅನ್ವಯ, ಮನ್ ಕೀ ಬಾತ್ ಕಾರ್ಯಕ್ರಮದ ವೀಕ್ಷಕರ ಸಂಖ್ಯೆ 2018-2020ರ ಅವಧಿಯಲ್ಲಿ ಅಂದಾಜು 6 ಕೋಟಿಯಿಂದ 14.35 ಕೋಟಿಗೆ ಏರಿಕೆಯಾಗಿದೆ.

ಮನ್ ಕೀ ಬಾತ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿವಿಧ ಸಮುದಾಯವನ್ನು ತಲುಪುತ್ತಿದ್ದಾರೆ. ಪೂರ್ತಿಯಾಗಿ ರಾಜಕೀಯ ಹೊರತಾಗಿಯೇ ಮಾತನಾಡುತ್ತಾರೆ. ಸಾಧಕರನ್ನು ಹೊಗಳುತ್ತಾರೆ. ಅದೆಷ್ಟೋ ರಾಜ್ಯಗಳ ಕುಗ್ರಾಮಗಳ ಸಾಧಕರನ್ನೂ ಅವರು ಈ ಮನ್ ಕೀ ಬಾತ್ನಲ್ಲಿ ಉಲ್ಲೇಖಿಸಿದ್ದುಂಟು. ಒಟ್ಟಾರೆ ಪ್ರತಿ ತಿಂಗಳ ಕೊನೆಯಲ್ಲಿ ನಡೆಯುವ ಈ ಮನ್ ಕೀ ಬಾತ್ಗೆ ಅಪಾರ ಶ್ರೋತೃಗಳು ಇರುವುದು ಸುಳ್ಳಲ್ಲ.

