ಬೆಂಗಳೂರು: ಮಸೀದಿ, ದರ್ಗಾಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿ ವರ್ಧಕಗಳನ್ನು ಬಳಸದಂತೆ ರಾಜ್ಯ ವಕ್ಫ್ ಬೋರ್ಡ್ ಮಂಡಳಿ ಸುತ್ತೋಲೆ ಹೊರಡಿಸಿದೆ.

ವಕ್ಫ್ ಬೋರ್ಡ್ ಅಡಿಯಲ್ಲಿ ನೋಂದಣಿಯಾಗಿರುವ ಸುಮಾರು 32 ಸಾವಿರ ಮಸೀದಿಗಳು ಹಾಗೂ ದರ್ಗಾಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿ ವರ್ಧಕಗಳನ್ನು ಬಳಸದಂತೆ ಸೂಚಿಸಲಾಗಿದೆ.

ಶಬ್ದಮಾಲಿನ್ಯ ನಿಯಂತ್ರಣ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಕಳೆದ ಡಿ.19ರಂದು ರಾಜ್ಯ ವಕ್ಫ್ ಬೋರ್ಡ್ ಸಭೆ ನಡೆಸಿತ್ತು.

ಎಲ್ಲಾ ಮಸೀದಿ ಹಾಗೂ ದರ್ಗಾಗಳ ಆಡಳಿತ ಸಮಿತಿಗಳಿಗೆ ಶಬ್ದಮಾಲಿನ್ಯ ನಿಯಂತ್ರಣ ಸಂಬಂಧ ಅರಿವು ಮೂಡಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಇದೀಗ ಸುತ್ತೋಲೆ ಹೊರಡಿಸಲಾಗಿದೆ.

ಇದರ ಹೊರತಾಗಿ ಮಸೀದಿಗಳಲ್ಲಿ ಅಝಾನ್ ಹೇಳಲು, ಮರಣವಾರ್ತೆ, ದಫನ್ ಕಾರ್ಯದ ಸಮಯ, ಚಂದ್ರ ದರ್ಶನದ ಮಾಹಿತಿ ಸೇರಿದಂತೆ ಇನ್ನಿತರ ಪ್ರಮುಖ ಉದ್ದೇಶಗಳಿಗೆ ಧ್ವನಿವರ್ಧಕ ಬಳಸಬಹುದು ಎಂದು ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮದ್ ಯೂಸುಫ್ ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಮತ್ತು ಕರ್ನಾಟಕ ಮುಸ್ಲಿಂ ಜಮಾತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸಾದಿ ಅವರು, ‘ಅಝಾನ್ ಬಗ್ಗೆ ರಾಜ್ಯ ವಕ್ಫ್ ಮಂಡಳಿ ಯಾವುದೇ ನಿರ್ಬಂಧ ಹೇರಿಲ್ಲ. ಸುತ್ತೋಲೆಯ ಕ್ರಮ ಸಂಖ್ಯೆ ಮೂರರಲ್ಲಿ ಸ್ಪಷ್ಟವಾಗಿ ಅಝಾನ್ ಮತ್ತು ಇತರ ಯಾವ ವಿಚಾರಗಳಿಗೆ ಧ್ವನಿವರ್ಧಕ ಬಳಸಬಹುದೆಂದು ಸ್ಪಷ್ಟಪಡಿಸಲಾಗಿರುತ್ತದೆ.
10-07-2017 ರಂದು ಆಗಿನ ವಕ್ಫ್ ಮಂಡಳಿಯ ಆಡಳಿತಾಧಿಕಾರಿ ಹೊರಡಿಸಿದ ಸುತ್ತೋಲೆಯ ಯಥಾ ಪ್ರತಿಯನ್ನೇ 19-12-2020 ರಂದು ಹೊರಡಿಸಲಾಗಿದೆ. ಅಲ್ಲದೆ, ಈಗಿನ ನಿರ್ಣಯದಲ್ಲಿ ಯಾವುದೇ ಲೋಪದೋಷಗಳಿದ್ದರೂ ಮುಂದಿನ ಸಭೆಯಲ್ಲಿ ಚರ್ಚಿಸಿ ಸರಿಪಡಿಸಲಾಗುವುದು ಎಂದವರು ಹೇಳಿದ್ದಾರೆ.