Monday, April 29, 2024
spot_imgspot_img
spot_imgspot_img

ಪುದೀನಾದ ಕಣ ಕಣದಲ್ಲೂ ಇದೆ ಔಷಧ ಗುಣ

- Advertisement -G L Acharya panikkar
- Advertisement -

ಪುದೀನಾ ಸಸ್ಯ ಔಷಧೀಯ ಕಣಜ. ಇದು ಸರ್ವ ಋತುವಿನಲ್ಲೂ ಸಿಗುವ ಅಡುಗೆಯಲ್ಲಿ ಬಳಸುವ ಸುವಾಸನೆಯುಕ್ತ ಹಾಗೂ ರುಚಿಕರವಾದ ಸೊಪ್ಪು. ಇದರಲ್ಲಿ ಅತ್ಯದ್ಭುವಾದ ಔಷಧೀಯ ಗುಣಗಳಿದ್ದು, ಇದನ್ನು ನಿತ್ಯವೂ ಆಹಾರದಲ್ಲಿ ಬಳಸುವುದರಿಂದ ಅನೇಕ ವ್ಯಾಧಿಗಳು ನಿವಾರಣೆಯಾಗುತ್ತವೆ. ಪುದೀನಾ ಸೊಪ್ಪಿಗೆ ಅಡುಗೆ ಮನೆಯಲ್ಲಿ ಕಾಯಂ ಸ್ಥಾನ ನೀಡಬಹುದಾಗಿದೆ. ಪುದೀನಾ ಇಲ್ಲವಾದರೆ ಅನೇಕ ಅಡುಗೆಗಳಿಗೆ ರುಚಿಯೇ ಬರುವುದಿಲ್ಲ. ಮಾಂಸದ ಅಡುಗೆಗಳಲ್ಲಿಯೂ ಪುದೀನಾ ಸೊಪ್ಪು ಇರಲೇಬೇಕು.

ಸ್ತ್ರೀಯರ ಸೌಂದರ್ಯವನ್ನು ಹೆಚ್ಚಿಸುವ ಗುಣ ಹೊಂದಿರುವ ಪುದೀನಾ ಸೊಪ್ಪು ಅತ್ಯುತ್ತಮ ಸೌಂದರ್ಯವರ್ಧಕ. ಒಂದು ಹಿಡಿ ಪುದೀನಾ ಸೊಪ್ಪು ನುಣ್ಣಗೆ ಅರೆದು ಅದಕ್ಕೆ 2-3 ಚಮಚ ಗಟ್ಟಿಯಾದ ಮೊಸರು (ಮೊಸರಿನ ಬದಲು ಬೇಕಿದ್ದಲ್ಲಿ ಮೊಟ್ಟೆಯ ಬಿಳಿಯ ಲೋಳೆಯನ್ನು ಬಳಸಬಹುದು) ಹಾಗೂ 1 ಚಮಚ ಶುದ್ಧ ಅರಿಶಿಣ ಪುಡಿ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಲೇಪನ ಮಾಡಿಕೊಂಡು 1/2 ಗಂಟೆಯ ನಂತರ ಉಗರು ಬೆಚ್ಚಗಿನ ನೀರಲ್ಲಿ ಮುಖ ತೊಳೆದುಕೊಂಡರೆ ಮುಖದ ಅಂದಗೆಡಿಸುವ ಮೊಡವೆಗಳು, ಮಚ್ಚೆಗಳು ನಿವಾರಣೆಯಾಗಿ, ಮುಖದ ಚರ್ಮವು ಕಾಂತಿಯಿಂದ ಹೊಳೆಯುತ್ತದೆ.

ಮಕ್ಕಳಿಗೆ ಅತಿಸಾರ ಭೇದಿ, ವಾಂತಿ ಇದ್ದಾಗ 1 ಚಮಚ ಪುದೀನಾ ರಸ ಬೆಳಗ್ಗೆ ಮತ್ತು ಸಂಜೆ ಕುಡಿಸಿದರೆ ತಕ್ಷಣ ನಿವಾರಣೆಯಾಗುತ್ತದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಹಿರಿಯರಿಗೂ ಶೀಘ್ರ ಗುಣವಾಗುತ್ತದೆ. ಪುದೀನಾ ರಸಕ್ಕೆ ಅರಸಿಣ ಕಲಸಿ ಮೈಗೆ ಲೇಪನ ಮಾಡಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ನವೆ, ಉರಿ ಇನ್ನು ಮುಂತಾದ ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತವೆ. ದೇಹದಲ್ಲಿನ ಉಷ್ಣ ಕಡಿಮೆಯಾಗುತ್ತದೆ.ಪುದೀನಾ ಎಲೆಗಳ ರಸಕ್ಕೆ ಜೇನುತುಪ್ಪ ಅಥವಾ ಕೆಂಪು ಕಲ್ಲು ಸಕ್ಕರೆ, ನಿಂಬೆಹಣ್ಣಿನ ರಸ ಕಲಸಿ ಸೇವಿಸಿದರೆ ಆಯಾಸ, ನಿಶ್ಯಕ್ತಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗಿ ಮನಸ್ಸಿಗೆ ಉಲ್ಲಾಸ ಉಂಟುಮಾಡುತ್ತೆ.

ಪುದೀನಾ ಸೊಪ್ಪನ್ನು ನೆರಳಲ್ಲಿ ಒಣಗಿಸಿ ವಸ್ತ್ರಗಾಲಿತ ಚೂರ್ಣ ಮಾಡಿಟ್ಟುಕೊಂಡು, 2 ಲೋಟ ನೀರಿಗೆ 2 ಚಮಚ ಚೂರ್ಣ ಹಾಕಿ, ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ 1/2 ಲೋಟ ನೀರಾದಾಗ ಕೆಳಗಿಳಿಸಿ. ಉಗರು ಬೆಚ್ಚಗಿದ್ದಾಗ ಸೋಸಿ ಬೆಳಗ್ಗೆ ಮತ್ತು ಸಂಜೆ ಕುಡಿದರೆ ಸ್ತ್ರೀಯರ ಋತಸ್ರಾವ ಸಮಸ್ಯೆಗಳು ದೂರವಾಗುತ್ತವೆ. ಹೊಟ್ಟೆ ನೋವು ನಿವಾರಣೆಯಾಗಿ ತಿಂಗಳ ಮುಟ್ಟು ಸಕಾಲದಲ್ಲಾಗುತ್ತದೆ. (ಮುಟ್ಟಾಗುವ ಮೂರು ದಿನ ಮೊದಲಿಂದಲೂ ತೆಗೆದುಕೊಳ್ಳಬೇಕು).

ದಿನವು ನಾಲೈದು ಪುದೀನಾ ಎಲೆಗಳನ್ನು ಜಗಿದು ತಿನ್ನುವುದರಿಂದ, ಹಲ್ಲುಗಳ ಕದಲುವಿಕೆ, ಹಲ್ಲುಗಳ ನೋವು, ದವಡೆಯಲ್ಲಿ ರಕ್ತಸ್ರಾವ ನಿವಾರಣೆಯಾಗಿ, ವಸಡುಗಳು ದೃಢವಾಗಿ, ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತೆ. ಪುದೀನಾ ಎಲೆಗಳನ್ನು ಜಜ್ಜಿ
ಮೂಸುತ್ತಿದ್ದರೆ, ತಲೆನೋವು, ತಲೆ ಸುತ್ತುವಿಕೆ ಶಮನವಾಗುತ್ತದೆ. ಪುದೀನಾ ಕಷಾಯಕ್ಕೆ ಜೇನುತುಪ್ಪ ಕಲಸಿ ಸೇವಿಸುತ್ತಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಒಂದು ಹಿಡಿಯಷ್ಟು ಪುದೀನಾ ಸೊಪ್ಪನ್ನು ನೀರಲ್ಲಿ ಹಾಕಿ ಕುದಿಸಿ, ಆ ನೀರನ್ನು ದಿನಕ್ಕೆ ಮೂರು ಬಾರಿ ಕುಡಿದರೆ ಕೆಮ್ಮು ನೆಗಡಿ, ಗಂಟಲು ನೋವು, ಬಿಕ್ಕಳಿಕೆ ನಿವಾರಣೆಯಾಗುತ್ತದೆ. 2 ಚಮಚ ಪುದೀನಾ ರಸಕ್ಕೆ 1 ಚಮಚ ಜೇನುತುಪ್ಪ 1 ಚಮಚ ನಿಂಬೆಹಣ್ಣಿನ ರಸ ಕಲಸಿದಾಗ ತುಂಬಾ ರುಚಿಕರವಾದ ಔಷಧಿ ತಯಾರಾಗುತ್ತದೆ. ಇದನ್ನು ಬೆಳಗ್ಗೆ ಮಧ್ಯಾಹ್ನ ಮತ್ತು ಸಂಜೆ ಸೇವಿಸಿದರೆ ಹೊಟ್ಟೆನೋವು, ಉಬ್ಬರ, ಗ್ಯಾಸ್ ಸಮಸ್ಯೆಗಳು ನಿವಾರಣೆಯಾಗುತ್ತವೆ.

- Advertisement -

Related news

error: Content is protected !!