ಉಪ್ಪಿನಂಗಡಿ :- ಟ್ರಾನ್ಸಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಪವರ್ ಮ್ಯಾನ್ ಮೃತ್ಯು ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ವಿದ್ಯುತ್ ಟ್ರಾನ್ಸಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಪವರ್ ಮ್ಯಾನ್ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ.
ಬಿಜಾಪುರ ಮೂಲದ, ಬೆಳ್ತಂಗಡಿ ಮೆಸ್ಕಾಂ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಬಸವರಾಜ್ ಎಂಬವರು ಮೃತಪಟ್ಟ ಪವರ್ ಮ್ಯಾನ್ ಕಲ್ಲೇರಿಯ ವಿದ್ಯುತ್ ಟ್ರಾನ್ಸಫಾರ್ಮರ್ ಬಳಿ ಅರ್ತ್ ಫಾಲ್ಟ್ ನ್ನು ದುರಸ್ತಿಗೊಳಿಸುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಳೆದ ವರ್ಷ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲೂ ಇದೇ ರೀತಿಯ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದ ಪವರ್ ಮ್ಯಾನ್ ಒಬ್ಬರು ಇದೇ ರೀತಿ ಸಾವನ್ನಪ್ಪಿದ್ದರು.
ಮೆಸ್ಕಾಂ ಬಳಿ ಪವರ್ ಮ್ಯಾನ್ ಬಳಕೆಗೆ ಅತೀ ಅವಶ್ಯಕವಾಗಿರುವ ಸೇಪ್ಟಿ ಶೂ ,ಹಾಗೂ ಸೇಪ್ಟಿ ಗ್ಲೌಸ್ ಸಮರ್ಪಕವಾಗಿ ಪೂರೈಕೆ ಇಲ್ಲ ಎಂಬ ಆರೋಪವೂ ಕೇಳಿ ಬಂದಿದೆ . ಇಂತಹ ಸುರಕ್ಷತಾ ಸಾಧನಗಳ ಕೊರತೆಯಲ್ಲಿ ಕೆಲಸ ನಿರ್ವಹಿಸಬೇಕಾದ ಒತ್ತಡದಲ್ಲಿ ಪವರ್ ಮ್ಯಾನ್ ಗಳು ಇದ್ದಾರೆ ಎನ್ನಲಾಗುತ್ತಿದೆ . ತನ್ನ ಸಿಬ್ಬಂದಿಗಳ ಸುರಕ್ಷತೆ ಕಾಪಾಡುವಲ್ಲಿ ಮೆಸ್ಕಾಂ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪವು ಸಿಬ್ಬಂದಿ ವಲಯದಲ್ಲಿ ಕೇಳಿ ಬರುತ್ತಿದೆ