


ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತುವನ್ನು ಸೇವಿಸಿದ ಆರೋಪದ ಮೇಲೆ ಬೆಳ್ತಂಗಡಿ ನಿವಾಸಿಯೊಬ್ಬರ ವಿರುದ್ಧ ಎನ್.ಡಿ.ಪಿ.ಎಸ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಆನಂದ ಎಂ. ರವರು ಆಗಸ್ಟ್ 2 ರಂದು ಸಂಜೆ ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಬೆಳ್ತಂಗಡಿ ಪೊಟ್ಟುಕೆರೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಅಮಲಿನಲ್ಲಿ ಇರುವುದನ್ನು ಗಮನಿಸಿದ ಪೊಲೀಸರು ಆತನನ್ನು ವಿಚಾರಿಸಿದ್ದಾರೆ.ವಿಚಾರಣೆಯ ವೇಳೆ ನಶೆಯ ಅಮಲಿನಲ್ಲಿದ್ದ ವ್ಯಕ್ತಿಯು ನಿಷೇಧಿತ ಮಾದಕ ವಸ್ತುವನ್ನು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ವಿಚಾರಿಸಿದಾಗ ಆತ ಬೆಳ್ತಂಗಡಿ ನಿವಾಸಿ ಶ್ರೀರಾಜ್ ಶೆಟ್ಟಿ (36) ಎಂದು ಗುರುತಿಸಲಾಗಿದೆ.
ತಕ್ಷಣವೇ ಆತನನ್ನು ವೈದ್ಯಕೀಯ ತಪಾಸಣೆಗಾಗಿ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಮುಂದೆ ಹಾಜರುಪಡಿಸಲಾಯಿತು. ತಪಾಸಣೆಯಲ್ಲಿ ಶ್ರೀರಾಜ್ ಶೆಟ್ಟಿ ಮಾದಕವಸ್ತು ಸೇವಿಸಿರುವುದು ದೃಢಪಟ್ಟಿದೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ ಅ.ಕ್ರ. 83/2026 ರಂತೆ ಎನ್.ಡಿ.ಪಿ.ಎಸ್ ಆಕ್ಟ್ ಕಲಂ 27(b) ಮತ್ತು 22(a) ರ ಅಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.








