Saturday, May 18, 2024
spot_imgspot_img
spot_imgspot_img

ಅನುಮಾನ ಹುಟ್ಟು ಹಾಕಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಂದೇಶ!!

- Advertisement -G L Acharya panikkar
- Advertisement -

ಪುತ್ತೂರು: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನ ಹಾಲಿ ಅಧ್ಯಕ್ಷರಾದ ಎ.ಮುರಳೀಧರ ರೈ ಮಠಂತಬೆಟ್ಟುರವರು ಕಳುಹಿಸಿದ ‘ವಿರಮಿಸುತ್ತಿದ್ದೇನೆ’ ಎಂಬ ಒಕ್ಕಣೆಯುಳ್ಳ ನಿಗೂಡಾರ್ಥದ ಸಂದೇಶವು ಹಲವಾರು ಅನುಮಾನಕ್ಕೆ ಕಾರಣವಾಗಿದೆ.

ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ ಆಗಿರುವ ಎ. ಮುರಳೀಧರ ರೈಯವರು ಇದ್ದಕ್ಕಿದ್ದಂತೆ ಪಕ್ಷದ ಕೆಲವು ನಾಯಕರ ಧೋರಣೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷದಿಂದ ದೂರವಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ವ್ಯಾಪ್ತಿಯ ಕೆಲವೆಡೆ ಮುರಳೀಧರ ರೈಯವರ ಗಮನಕ್ಕೆ ಬಾರದೆ ಸಭೆ ಆಯೋಜಿಸಿರುವುದು, ಈ ಸಭೆಗಳಲ್ಲಿ ಮುರಳೀಧರ ರೈಯವರ ಬಗ್ಗೆ ಟೀಕೆ ಮಾಡುತ್ತಿರುವುದು, ಕೆಲವು ಹಿರಿಯ ಕಾಂಗ್ರೆಸ್ಸಿಗರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವುದು ಮುಂತಾದ ಬೆಳವಣಿಗೆಗಳಿಂದ ನೊಂದಿರುವ ಮುರಳೀಧರ ರೈಯವರು ಪಕ್ಷದ ಚಟುವಟಿಕೆಯಿಂದ ದೂರವಾಗಲು ಯೋಚನೆ ನಡೆಸಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಮಠಂತಬೆಟ್ಟು ಅನಂತ ರೈಯವರ ಪುತ್ರರಾದ ಮುರಳೀಧರ ರೈಯವರು ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಮತ್ತು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯವರ ಕಟ್ಟರ್ ಬೆಂಬಲಿಗರಾಗಿದ್ದಾರೆ. ಯಾವುದೇ ಬಣ ರಾಜಕೀಯದಲ್ಲಿ ಗುರುತಿಸಿಕೊಂಡಿಲ್ಲದ ಇವರು ಇದೀಗ ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷ ಸಿದ್ಧಗೊಳ್ಳುತ್ತಿರುವ ವೇಳೆಗೇ ಪಕ್ಷದ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಅವರನ್ನು ಸಮಾಧಾನ ಪಡಿಸುವ ಕೆಲಸ ನಾಯಕರಿಂದ ನಡೆಯುತ್ತಿದೆಯಾದರೂ ಅವರು ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಬಿಜೆಪಿಯ ಭದ್ರಕೋಟೆಯಾಗಿದ್ದ ಕೋಡಿಂಬಾಡಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಪಂಚಾಯತ್ ಆಡಳಿತ ಚುಕ್ಕಾಣಿ ಹಿಡಿಯುವಂತಾಗಲು ಮುರಳೀಧರ ರೈ ಮುಖ್ಯ ಕಾರಣಕರ್ತರಲ್ಲಿ ಓರ್ವರಾಗಿದ್ದರು. ಸೌಮ್ಯವಾದಿ ರಾಜಕಾರಣಿ ಎಂದೇ ಕರೆಯಲ್ಪಡುವ ಮುರಳೀಧರ ರೈಯವರ ಈ ನಡೆ ಪಕ್ಷದಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದೆ. ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.

ಆತ್ಮೀಯ ಸಹೃದಯಿ ಕಾಂಗ್ರೆಸ್ ಮಿತ್ರರೇ:
ಬಹಳಷ್ಟು ಸಹನೆಯಿಂದ, ತಾಳ್ಮೆಯಿಂದ, ಕಾಂಗ್ರೆಸ್ ಭ್ರಾತೃತ್ವದಿಂದ, ನಾಯಕತ್ವದಿಂದ ಹೈಕಮಾಂಡ್ ಮಾತನ್ನು ಶಿರಸಾವಹಿಸಿ ಪಾಲಿಸಿಕೊಂಡು ಬರುವ ಕರ್ತವ್ಯವನ್ನು ತಾವುಗಳು ನಿರ್ವಹಿಸಿಕೊಂಡು ನಾನು ಯಶಸ್ವಿಯಾಗಲು ಕಾರಣಕರ್ತರಾದ ನಿಮ್ಮಗಳಿಗೆ ನನ್ನ ಹೃದಯಾಂತರದ ಕೃತಜ್ಞತೆಗಳು. ದ.ಕ ಜಿಲ್ಲೆಯ ಪಕ್ಷದ ವರಿಷ್ಟರ ಆದೇಶದ ಮೇರೆಗೆ ನಾನು ವಿರಮಿಸುತಿದ್ದೇನೆ. ಶತಾಯಗತಾಯ ರಾತ್ರಿ ಹಗಲು ನನ್ನೊಂದಿಗೆ ಸಹಕರಿಸಿ ನನ್ನ ಯಶಸ್ಸಿಗೆ ಕಾರಣಕರ್ತರಾದ ನನ್ನ ಸಹೋದರ ಕಾಂಗ್ರೆಸ್ ಬಂಧುಗಳಿಗೆ ನನ್ನೊಳಗಿನ ಹೃದಯಾಂತರದೊಳಗಿನ ಕೃತಜ್ಞತೆಗಳು.

ಇತೀ,
ನಿಮ್ಮವನೇ ಆದ,
ಮುರಳೀದರ ರೈ ಮಠಂತಬೆಟ್ಟು.

- Advertisement -

Related news

error: Content is protected !!