



ನವದೆಹಲಿ: ಸಾಮಾಜಿಕ ಜಾಲತಾಣ ಸಂಸ್ಥೆ ಮೆಟಾ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಅಕ್ರಮ ವಿಷಯಗಳನ್ನು ಪ್ರಚಾರ ಮಾಡುವ ಪಾವತಿಸಿದ ಜಾಹೀರಾತುಗಳು ಕಾಣಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮೆಟಾಗೆ ನೋಟಿಸ್ ಜಾರಿ ಮಾಡಿದೆ.
ಸಚಿವಾಲಯವು ಇಂತಹ ಎಲ್ಲ ಜಾಹೀರಾತುಗಳು ಹಾಗೂ ಕಾನೂನುಬಾಹಿರ ವಿಷಯಗಳನ್ನು ತಕ್ಷಣವೇ ಇನ್‌ಸ್ಟಾಗ್ರಾಂನಿಂದ ತೆಗೆದುಹಾಕುವಂತೆ ಸೂಚಿಸಿರುವುದರ ಜೊತೆಗೆ, ಈ ರೀತಿಯ ವಿಷಯಗಳು ವೇದಿಕೆಯಲ್ಲಿ ಹೇಗೆ ಪ್ರಕಟವಾದವು, ಅವುಗಳನ್ನು ತಡೆಯಲು ಸಂಸ್ಥೆ ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬ ಕುರಿತು 7 ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಮೆಟಾಗೆ ನಿರ್ದೇಶನ ನೀಡಿದೆ.
ವರದಿಗಳ ಪ್ರಕಾರ, ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ಕೆಲವು ಪಾವತಿಸಿದ ಜಾಹೀರಾತುಗಳು ಬಳಕೆದಾರರನ್ನು ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಕ್ರಮ ವಿಷಯಗಳನ್ನು ಹೊಂದಿರುವ ವೆಬ್‌ಸೈಟ್‌ಗಳತ್ತ ಕೊಂಡೊಯ್ಯುತ್ತಿದ್ದವು ಎನ್ನಲಾಗಿದೆ. ಇಂತಹ ವಿಷಯಗಳ ಪ್ರಸಾರಕ್ಕೆ ವೇದಿಕೆಯ ಅಲ್ಗಾರಿದಮ್ ಸಹ ಪರೋಕ್ಷವಾಗಿ ಕಾರಣವಾಗಿರಬಹುದೆಂಬ ಅನುಮಾನವನ್ನೂ ಸರ್ಕಾರ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಬಲಿಷ್ಠ ಸುರಕ್ಷತಾ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಅಕ್ರಮ ವಿಷಯಗಳ ಮೇಲ್ವಿಚಾರಣೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಸಚಿವಾಲಯ ಸೂಚಿಸಿದೆ. ನೋಟಿಸ್‌ಗೆ ನಿಗದಿತ ಅವಧಿಯಲ್ಲಿ ಸೂಕ್ತ ಉತ್ತರ ನೀಡದಿದ್ದರೆ ಅಥವಾ ಅಗತ್ಯ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಲು ವಿಫಲವಾದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಪೋಕ್ಸೋ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಮಕ್ಕಳ ಸುರಕ್ಷತೆಗೆ ಧಕ್ಕೆ ತರುವ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಸರ್ಕಾರ, ಮೆಟಾದ ಪ್ರತಿಕ್ರಿಯೆ ಮತ್ತು ಕೈಗೊಳ್ಳುವ ಕ್ರಮಗಳ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತದೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.








