


ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ದೂರದ ಮಚೇಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದು,ಒಟ್ಟು 10 ಯೋಧರು ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರು ಮೊದಲು ಸಾವಿಗೀಡಾದರು. ತೀವ್ರ ಗಾಯಗೊಂಡಿದ್ದ ಮತ್ತೊಬ್ಬ ಸೇನಾ ಸಿಬ್ಬಂದಿ ಆಸ್ಪತ್ರೆಯಲ್ಲಿ ಅಸುನೀಗಿದರು. ಇದರಿಂದ ಸಾವಿನ ಸಂಖ್ಯೆ ಐದಕ್ಕೆ ಏರಿದೆ. 6 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಕಥುವಾ ಪಟ್ಟಣದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಲೋಹೈ ಮಲ್ಹಾರ್ನ ಬದ್ನೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆಲ ಸೇನಾ ವಾಹನಗಳು ಈ ಪ್ರದೇಶದಲ್ಲಿ ನಿತ್ಯ ಗಸ್ತು ತಿರುಗುತ್ತಿದ್ದವು ಎಂದು ಹೇಳಲಾಗಿದೆ.
ಕತುವಾ ಜಿಲ್ಲೆಯ ಮಚೇಡಿ ಪ್ರದೇಶದ ಜೆಂಡಾ ನಲ್ಲಾ ಗ್ರಾಮದ ಬಳಿ ಸೋಮವಾರ (ಜು.8) ಮಧ್ಯಾಹ್ನ 3.30ರ ಸುಮಾರಿಗೆ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ನಮ್ಮ ಸೈನಿಕರು ಸಹ ಪ್ರತಿದಾಳಿ ನಡೆಸಿದ್ದರು.. ಭಾರತೀಯ ಸೇನೆಯ ಕಾರ್ಪ್ಸ್ ಅಡಿಯಲ್ಲಿ ಈ ಪ್ರದೇಶ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 2 ದಿನಗಳಲ್ಲಿ ಇದು ಸೇನೆಯ ಮೇಲೆ ನಡೆದ 2ನೇ ದಾಳಿಯಾಗಿದೆ. ಜೊತೆಗೆ ಒಂದು ವಾರದಲ್ಲಿ ಸೇನಾ ವಾಹನವನ್ನೇ ಗುರಿಯಾಗಿಸಿ ನಡೆಸಿದ 2ನೇ ದಾಳಿಯೂ ಆಗಿದೆ. ಇತ್ತೀಚೆಗೆ ಇಲ್ಲಿನ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ 2 ಪ್ರತ್ಯೇಕ ಎನ್ಕೌಂಟರ್ಗಳಲ್ಲಿ 6 ಭಯೋತ್ಪಾದಕರು ಮೃತಪಟ್ಟಿದ್ದರು
ಸೇನೆಯ ವಾಹನ ತೆರಳುವ ಕುರಿತು ಮಾಹಿತಿ ಪಡೆದಿದ್ದ ಉಗ್ರರು, ಯೋಜನೆ ರೂಪಿಸಿ, ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಸಮೀಪದ ಅರಣ್ಯ ಪ್ರದೇಶದಲ್ಲಿ ಸುಮಾರು ಇಬ್ಬರು-ಮೂವರು ಅಡಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಉಗ್ರರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಹೆಚ್ಚಿನ ಸೈನಿಕರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.