ಇಂದಿನಿಂದ ದ್ವಿಮುಖ ಸಂಚಾರಕ್ಕೆ ಅನುವು





ವಿಟ್ಲ: ಬಹು ವರ್ಷದ ಬೇಡಿಕೆಯಾಗಿದ್ದ ವಿಟ್ಲ-ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಇಂದು ಉದ್ಘಾಟಿಸಿ ಲೋಕಾರ್ಪಣೆಗೈದರು.
ಶಾಸಕರ ಅನುದಾನದಲ್ಲಿ ರಸ್ತೆ ನಿರ್ಮಾಣಗೊಂಡಿದ್ದು, ಇಂದಿನಿಂದ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಒಡ್ಯಮೆ ಇನ್ಫ್ರಾ ಕಂಪೆನಿಯಿಂದ ಕಾಮಗಾರಿ ನಡೆದಿದ್ದು, 130 ಮೀಟರ್ ಉದ್ದ, 7 ಮೀಟರ್ ಅಗಲ, 10 ಇಂಚು ದಪ್ಪದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ.
ಕಡೂರು-ಕಾಞಂಗಾಡ್ ರಾಜ್ಯ ಹೆದ್ದಾರಿಯ ಪ್ರಮುಖ ಭಾಗವಾಗಿರುವ ಈ ಪ್ರದೇಶದಲ್ಲಿ ಈ ಹಿಂದೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದಿನನಿತ್ಯ ಸಂಚರಿಸುವ ಸಾವಿರಾರು ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಮಳೆಗಾಲದಲ್ಲಿ ಈ ಭಾಗದಲ್ಲಿ ಸಂಚಾರ ನರಕಸದೃಶವಾಗುತ್ತಿತ್ತು. ಇದೀಗ ಅತ್ಯಾಧುನಿಕ ಮಾದರಿಯಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಿರುವುದರಿಂದ ಈ ಭಾಗದ ಸಂಚಾರ ವ್ಯವಸ್ಥೆ ಸಂಪೂರ್ಣ ಸುಧಾರಣೆಯಾಗಿದ್ದು, ಸಾರ್ವಜನಿಕರ ದಶಕಗಳ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಕ್ಕಂತಾಗಿದೆ.








