Tuesday, July 28, 2026
spot_imgspot_img
spot_imgspot_img

ವಿಟ್ಲ ರಸ್ತೆ ಅಗಲೀಕರಣಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ ಶಾಸಕ ಅಶೋಕ್ ಕುಮಾರ್‍ ರೈ

- Advertisement -
- Advertisement -

ಜನರ ಹಿತಕ್ಕೆ ಧಕ್ಕೆಯಾದರೆ ಯೋಜನೆ ಕೈಬಿಡುವುದಾಗಿ ಭರವಸೆ, ಬೈಪಾಸ್‌ಗೆ ಆದ್ಯತೆ

ವಿಟ್ಲ: ವಿಟ್ಲ ಪಟ್ಟಣದ ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡುವ ಪ್ರಸ್ತಾವನೆಗೆ ಸ್ಥಳೀಯ ವರ್ತಕರು ಮತ್ತು ನಿವಾಸಿಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿಟ್ಲ ವಾಣಿಜ್ಯ ಮತ್ತು ವರ್ತಕರ ಸಂಘದ ನೇತೃತ್ವದ 27 ಜನರ ನಿಯೋಗವು ಸೋಮವಾರ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯ ತಿಳಿಸಿತು.

"ನೂರಾರು ಕುಟುಂಬಗಳು ಬೀದಿಗೆ ಬೀಳುತ್ತವೆ" ಪೇಟೆಯ ಮಧ್ಯಭಾಗದ ಕಟ್ಟಡಗಳನ್ನು ಕೆಡವಿ ರಸ್ತೆ ಅಗಲಗೊಳಿಸಿದರೆ ವ್ಯಾಪಾರ ಸಂಪೂರ್ಣ ಕುಸಿಯಲಿದೆ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದರು. ರಸ್ತೆಯ ಎರಡೂ ಬದಿಯಲ್ಲಿ ಮನೆಗಳು, ದೈವಸ್ಥಾನಗಳು, ನಾಗಬನಗಳು ಮತ್ತು ಧರ್ಮಸ್ಥಳ ಟ್ರಸ್ಟ್ ಕಚೇರಿಗಳಿವೆ. ಅಗಲೀಕರಣದಿಂದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದರು.

2016ರ ಭರವಸೆ ನೆನಪಿಸಿದ ನಿಯೋಗ:
2016ರಲ್ಲಿ ಆಗಿನ ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳ ಮನವಿಯಂತೆ ವರ್ತಕರು ತಮ್ಮ ಕಟ್ಟಡದಿಂದ ತಲಾ 8 ಅಡಿ ಜಾಗವನ್ನು ಬಿಟ್ಟುಕೊಟ್ಟಿದ್ದರು. ಆಗ “ಇದೇ ಕೊನೆಯ ಅಗಲೀಕರಣ, ಮುಂದೆ ಬೈಪಾಸ್ ಮಾಡುತ್ತೇವೆ” ಎಂದು ಭರವಸೆ ನೀಡಲಾಗಿತ್ತು ಎಂದು ನಿಯೋಗ ನೆನಪಿಸಿತು. ಆದರೆ ಈಗ ಮತ್ತೆ ಅಗಲೀಕರಣದ ಮಾತು ಕೇಳಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಶಾಸಕರಿಂದ ಸ್ಪಷ್ಟ ಭರವಸೆ:
ಸಾರ್ವಜನಿಕರ ಅಭಿಪ್ರಾಯ ಆಲಿಸಿದ ಶಾಸಕ ಅಶೋಕ್ ಕುಮಾರ್ ರೈ, “ಜನರಿಗೆ ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗುವ ಯಾವುದೇ ಯೋಜನೆಗೆ ನಾನು ಒಪ್ಪುವುದಿಲ್ಲ. ಅಗತ್ಯ ಬಿದ್ದರೆ ಈ ಅಗಲೀಕರಣ ಪ್ರಸ್ತಾವನೆಯನ್ನು ಇಲ್ಲೇ ಕೈಬಿಡುತ್ತೇನೆ” ಎಂದು ಭರವಸೆ ನೀಡಿದರು. ಅಗಲೀಕರಣದ ಬದಲು ರಿಂಗ್ ರೋಡ್ ನಿರ್ಮಾಣವೇ ಸೂಕ್ತ ಪರಿಹಾರ ಎಂದು ನಿಯೋಗ ಮನವಿ ಮಾಡಿದಾಗ, ಅದನ್ನು ಆದ್ಯತೆಯಾಗಿ ಪರಿಗಣಿಸುವುದಾಗಿ ಶಾಸಕರು ಹೇಳಿದರು.

ಇತರೆ 3 ಪ್ರಮುಖ ಬೇಡಿಕೆಗಳು:

ಹೊಸ ಪಟ್ಟಣ ಪಂಚಾಯಿತಿ ಕಚೇರಿ: ಹಾಲಿ ಕಚೇರಿಯಲ್ಲಿ ಪಾರ್ಕಿಂಗ್ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಇದೆ. ಹಳೆಯ ಕೆಇಬಿ ಬಳಿಯ 2 ಎಕರೆ ಸರ್ಕಾರಿ ಜಾಗದಲ್ಲಿ ಹೊಸ ಕಚೇರಿ ಕಟ್ಟಲು ಮನವಿ.

ಸಮರ್ಪಕ ಪಾರ್ಕಿಂಗ್: ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸೂಕ್ತ ಜಾಗ ಗುರುತಿಸಿದರೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಭರವಸೆ.

ವಿಟ್ಲವನ್ನು ತಾಲೂಕು ಕೇಂದ್ರವನ್ನಾಗಿ: ಈ ದೀರ್ಘಕಾಲದ ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ಶಾಸಕರು ತಿಳಿಸಿದರು.

ನಿಯೋಗದಲ್ಲಿ ವಿಟ್ಲ ವಾಣಿಜ್ಯ ಮತ್ತು ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ., ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಉದ್ಯಮಿ ಜಗನ್ನಾಥ ಸಾಲಿಯಾನ್, ವಿಟ್ಲ ಅರಮನೆಯ ಕೃಷ್ಣಯ್ಯ ಬಳ್ಳಾಲ್, ಉದ್ಯಮಿಗಳು ಮತ್ತು ಕಟ್ಟಡ ಮಾಲೀಕರಾದ ಸತೀಶ್ ಆಳ್ವ ಇರಾಗುತ್ತು, ಹೊನೆಸ್ಟ್ ಇನ್ಸಾಲ್, ಸುದರ್ಶನ್ ಪಡಿಯಾರ್, ಸುಭಾಷ್ಟಂದ್ರ ನಾಯಕ್, ವಿ.ಎ. ರಶೀದ್, ರಾಮದಾಸ್ ಶೆಣೈ, ಆ‌ರ್.ಕೆ. ಅಬ್ದುಲ್ಲಾ, ಪ್ರಭಾಕರ ಶೆಟ್ಟಿ, ದಿನೇಶ್ ಆಳ್ವ, ಇಬ್ರಾಹಿಂ ಸೇರಿದಂತೆ ಒಟ್ಟು 27 ಮಂದಿ ಭಾಗವಹಿಸಿ ಶಾಸಕರಿಗೆ ಮನವಿ ಸಲ್ಲಿಸಿದರು. ಶಾಸಕರ ಸಕಾರಾತ್ಮಕ ಸ್ಪಂದನೆಯಿಂದ ವಿಟ್ಲದ ಅಭಿವೃದ್ಧಿಗೆ ಹೊಸ ಭರವಸೆ ಮೂಡಿದೆ ಎಂದು ವರ್ತಕರ ಸಂಘದ ಮುಖಂಡರು ಹೇಳಿದರು.

- Advertisement -

Related news

error: Content is protected !!