


ವಾಷಿಂಗ್ಟನ್: ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಅಮೆರಿಕದ ಪಾಲಿಗೆ ಭಾರತ ಪ್ರಮುಖ ಮಿತ್ರರಾಷ್ಟ್ರವಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಉತ್ತಮ ಸಂಬಂಧ ಹೊಂದಿದ್ದಾರೆ. ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೋಲಿನ್ ಲೆವಿಟ್ ತಿಳಿಸಿದ್ದಾರೆ.
ಒಪ್ಪಂದ ಪೂರ್ಣವಾಗುವ ಹಂತದಲ್ಲಿದೆ ಎಂದು ಸ್ಪಷ್ಟಪಡಿದ ಅವರು, “ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದ ಅಂತಿಮವಾಗುವ ಕಾಲ ಸನ್ನಿಹಿತವಾಗಿದೆ ಎಂದು ಟ್ರಂಪ್ ಕಳೆದವಾರ ಹೇಳಿರುವುದು ನಿಜ; ಈ ಬಗ್ಗೆ ವಾಣಿಜ್ಯ ಕಾರ್ಯದರ್ಶಿ ಜತೆಗೂ ಮಾತುಕತೆ ನಡೆಸಿದ್ದೇನೆ. ಅವರು ಅಧ್ಯಕ್ಷರ ಜತೆ ಓವಲ್ ಕಚೇರಿಯಲ್ಲಿದ್ದಾರೆ. ಈ ಒಪ್ಪಂದಗಳನ್ನು ಅವರು ಅಂತಿಮಪಡಿಸುತ್ತಿದ್ದಾರೆ. ಅಧ್ಯಕ್ಷರು ಮತ್ತು ಭಾರತಕ್ಕೆ ಭೇಟಿ ನೀಡಲಿರುವ ಅವರ ವ್ಯಾಪಾರ ತಂಡ ಶೀಘ್ರವೇ ಇದನ್ನು ಪ್ರಕಟಿಸಲಿದೆ’ ಎಂದು ವಿವರಿಸಿದರು.ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಚೀನಾ ಪಾತ್ರದ ಬಗ್ಗೆ ಕೇಳಿದಾಗ, “ಭಾರತ ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಪ್ರಮುಖ ಮಿತ್ರರಾಷ್ಟ್ರ ಅಧ್ಯಕ್ಷರು ಭಾರತದ ಪ್ರಧಾನಿ ಮೋದಿ ಜತೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಇದು ಮಂದುವರಿಯಲಿದೆ” ಎಂದು ಉತ್ತರಿಸಿದರು.ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಮೆರಿಕಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಶ್ವೇತಭವನದ ಈ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.