ತಿರುವನಂತಪುರ: ಪ್ರಯಾಗರಾಜ್ ನಲ್ಲಿ 2025ರಲ್ಲಿ ನಡೆದ ಮಹಾಕುಂಭ ಮೇಳದ ವೇಳೆ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಥೆ ಬುಧವಾರ ಕೇರಳದಲ್ಲಿ ತಮ್ಮ ಸಂಗಾತಿ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದಾರೆ.

ತಿರುವನಂತಪುರದ ವಿಝಿಂಜಮ್ ನಲ್ಲಿರುವ ದೇವಸ್ಥಾನದಲ್ಲಿ ಈ ವಿವಾಹ ನೆರವೇರಿದೆ. ಇಂದೋರ್ ಮೂಲದ ಮೊನಾಲಿಸಾ, ಮಹಾಕುಂಭ ಮೇಳದ ಸಂದರ್ಭದಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರಾಟ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ದೇಶದಾದ್ಯಂತ ಗಮನ ಸೆಳೆದಿದ್ದರು.ದಂಪತಿಗಳು ರಜೆಯ ನಿಮಿತ್ತ ಕೇರಳಕ್ಕೆ ಬಂದಿದ್ದು, ಇಲ್ಲಿಯೇ ಮದುವೆಯಾಗಲು ತೀರ್ಮಾನಿಸಿದ್ದಾಗಿ ಫರ್ಮಾನ್ ಖಾನ್ ವರದಿಗಾರರಿಗೆ ತಿಳಿಸಿದ್ದಾರೆ.
‘ನಾವು ಆರು ತಿಂಗಳ ಹಿಂದೆ ಭೇಟಿಯಾದೆವು. ಬಳಿಕ ಒಟ್ಟಿಗೆ ಕೆಲಸ ಮಾಡಲು ಆರಂಭಿಸಿದ್ದೇವೆ. ಅವರು ನನಗೆ ಪ್ರಪೋಸ್ ಮಾಡಿದರು. ಕೇರಳಕ್ಕೆ ಬಂದಾಗ ಈ ದೇವಸ್ಥಾನ ನಮಗೆ ಇಷ್ಟವಾಯಿತು. ಆದ್ದರಿಂದ ಇಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದೇವೆ’ ಎಂದು ಅವರು ಹೇಳಿದರು.ಇನ್ನೊಂದೆಡೆ ಕೆಲವು ವರದಿಗಳ ಪ್ರಕಾರ, ಮೊನಾಲಿಸಾ ಪೂವಾರ್ ಪ್ರದೇಶದಲ್ಲಿ ನಡೆಯುತ್ತಿದ್ದ ಚಲನಚಿತ್ರ ಚಿತ್ರೀಕರಣದ ನಿಮಿತ್ತ ಕೇರಳದಲ್ಲಿದ್ದರು ಎನ್ನಲಾಗಿದೆ. ತಮ್ಮ ಅಂತರ್ಧಮೀ್ರಯ ಸಂಬಂಧಕ್ಕೆ ಕುಟುಂಬದಿಂದ ವಿರೋಧ ವ್ಯಕ್ತವಾಗಿದ್ದು, ಸಂಭಾವ್ಯ ಬೆದರಿಕೆಗಳ ಭೀತಿಯಿಂದ ದಂಪತಿಗಳು ಥಂಪನೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ರಕ್ಷಣೆ ಕೋರಿದ್ದಾರೆ ಎಂದು ವರದಿಯಾಗಿದೆ.
‘ನಮ್ಮ ಸಂಬಂಧವನ್ನು ನನ್ನ ಕುಟುಂಬ ಒಪ್ಪಿಕೊಂಡಿಲ್ಲ. ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಮೊನಾಲಿಸಾ ಮದುವೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಈ ಮದುವೆ ರಾಜಕೀಯ ವಲಯದಲ್ಲಿಯೂ ಗಮನ ಸೆಳೆದಿದೆ. ಸಮಾರಂಭದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) [ಸಿಪಿಐ(ಎಂ)] ನಾಯಕರು ಭಾಗವಹಿಸಿ ದಂಪತಿಗಳಿಗೆ ಬೆಂಬಲ ಸೂಚಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಕೇರಳ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ, ‘ಜಾತ್ಯತೀತ ಮೌಲ್ಯಗಳು ಮತ್ತು ಮಾನವೀಯತೆಯ ಮೇಲಿನ ಪ್ರೀತಿಗೆ ಕೇರಳ ಹೆಸರುವಾಸಿಯಾಗಿದೆ.
ಈ ಭೂಮಿಯ ಜನರು ಅದಕ್ಕಾಗಿ ಪ್ರಪಂಚದ ಮುಂದೆ ಹೆಮ್ಮೆಯಿಂದ ನಿಲ್ಲಬಹುದು’ ಎಂದು ಹೇಳಿದರು.ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಈ ಮದುವೆಯನ್ನು ‘ನಿಜವಾದ ಕೇರಳ ಸ್ಟೋರಿ’ ಎಂದು ಕರೆದರು. ರಾಜ್ಯವನ್ನು ಧಾರ್ಮಿಕ ಮೂಲಭೂತೀಕರಣದ ಕೇಂದ್ರವಾಗಿ ಚಿತ್ರಿಸಿದ ವಿವಾದಾತ್ಮಕ ಚಲನಚಿತ್ರ ಸರಣಿಯನ್ನು ಉಲ್ಲೇಖಿಸಿ ಅವರು ಈ ಮಾತು ಹೇಳಿದರು.ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಎ.ಎ. ರಹೀಮ್ ಮಾತನಾಡಿ, ‘ಅಂತರ್ಧಮೀ್ರಯ ಅಥವಾ ಅಂತರ್ಜಾತಿ ವಿವಾಹಗಳನ್ನು ಭಾರತದ ಅನೇಕ ಭಾಗಗಳಲ್ಲಿ ಜನರು ಯೋಚಿಸಲೂ ಸಾಧ್ಯವಾಗುವುದಿಲ್ಲ. ಆದರೆ ಕೇರಳದ ಶಕ್ತಿ ಎಂದರೆ ಅಂತಹ ವಿವಾಹಗಳು ಇಲ್ಲಿ ಸಹಜವಾಗಿ ನಡೆಯುತ್ತವೆ’ ಎಂದು ಹೇಳಿದರು.
ಆ ವೇಳೆ ಗಾಲಿಬ್ ಮಾಧ್ಯಮಗಳೊಂದಿಗೆ ಮಾತನಾಡಿ, ಸ್ನೇಹಿತನ ಸಲಹೆ ಹಾಗೂ ಹಿಂದೆ ಕೇರಳಕ್ಕೆ ಭೇಟಿ ನೀಡಿದ ಅನುಭವದ ಆಧಾರದ ಮೇಲೆ ರಾಜ್ಯದ ಕೋಮು ಸಾಮರಸ್ಯದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದರಿಂದ ಕೇರಳವನ್ನು ಆರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.








