


ಮೊರಾದಾಬಾದ್: ಬ್ರೇಕಪ್ ಬಳಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೋರ್ವ ಅವಳಿ ಸಹೋದರಿಗೆ 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ.
ಮೊರಾದಾಬಾದ್‌ನ ಮಜೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಬುದ್ಧಿ ವಿಹಾರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಹಾರ್ದಿಕ್(25), ತನ್ನ ಅವಳಿ ಸಹೋದರಿ ಹಿಮ್ಶಿಖಾಳನ್ನು 40ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆ ಮಾಡಿದ್ದಾನೆ. ಇಬ್ಬರೂ ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದು, ಹೋಳಿ ಆಚರಿಸಲು ಮನೆಗೆ ಬಂದಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಹಾರ್ದಿಕ್ ತನ್ನ ಗೆಳತಿಯೊಂದಿಗೆ ಬ್ರೇಕ್‌ಅಪ್ ಮಾಡಿಕೊಂಡಿದ್ದನು. ತನ್ನ ಪ್ರೀತಿ ವಿಫಲವಾಗಲು ತನ್ನ ತಾಯಿ ಮತ್ತು ಸಹೋದರಿಯೇ ಕಾರಣ ಎಂದು ಆತ ನಂಬಿದ್ದನು. ಈ ದ್ವೇಷ ಹಾಗೂ ಬ್ರೇಕ್‌ಅಪ್‌ನಿಂದ ಉಂಟಾದ ಖಿನ್ನತೆಯಿಂದಾಗಿ ಆತ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಮನೆಯ ಬೆಡ್‌ರೂಮ್‌ನಿಂದ ಅಡುಗೆ ಮನೆಯವರೆಗೆ ರಕ್ತದ ಕಲೆಗಳು ಹರಡಿಕೊಂಡಿದ್ದವು. ಹಾರ್ದಿಕ್ ತನ್ನ ತಾಯಿಯ ಮೇಲೆಯೂ ಮಾರಣಾಂತಿಕ ದಾಳಿ ಮಾಡಿದ್ದು, ತಾಯಿಯ ಕಿರುಚಾಟ ಕೇಳಿ ಪಕ್ಕದ ಮನೆಯವರು ಓಡಿ ಬಂದು ದೃಶ್ಯ ನೋಡಿ ದಿಗ್ಭ್ರಮೆಗೊಂಡರು.
ತಕ್ಷಣವೇ ಆಂಬ್ಯುಲೆನ್ಸ್ ಗೆ ಕರೆ ಮಾಡಿ ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಹಿಮ್ಮಿಖಾ ದಾರಿ ಮಧ್ಯೆಯೇ ಮೃತಪಟ್ಟಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ತಾಯಿಯನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಶನಿವಾರದಂದು(ಮಾ.7) ಬಂಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.







