


ಬೆಂಗಳೂರು: ಅಡುಗೆ ಮಾಡುವ ವಿಚಾರಕ್ಕೆ ಅತ್ತೆ ಮತ್ತು ಸೊಸೆಯ ನಡುವೆ ನಡೆದ ಜಗಳವು ತಾರಕಕ್ಕೇರಿ, ಮಾಜಿ ಐಟಿ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ಮೃತ ಮಹಿಳೆಯನ್ನು 35 ವರ್ಷದ ಸುಷ್ಮಾ ಎಂದು ಗುರುತಿಸಲಾಗಿದೆ. ಇವರು ಈ ಹಿಂದೆ ಡೆಲ್ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸುಷ್ಮಾ ಅವರು ಪುನೀತ್ ಕುಮಾರ್ ಎಂಬುವವರನ್ನು ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು ಮತ್ತು ಈ ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ. ಅಡುಗೆ ಮನೆಯಲ್ಲಿ ಅಡುಗೆ ಮಾಡುವಂತಹ ಸಾಮಾನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸುಷ್ಮಾ ಮತ್ತು ಅವರ ಅತ್ತೆ ಕಲ್ಪನಾ ಅವರ ನಡುವೆ ತೀವ್ರವಾದ ಜಗಳ ನಡೆದಿತ್ತು. ಇದರಿಂದ ತೀವ್ರವಾಗಿ ಮನನೊಂದ ಸುಷ್ಮಾ, ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ಅತ್ತೆ ಕಲ್ಪನಾ ಅವರು ಸುಷ್ಮಾ ಅವರಿಗೆ ಅಡುಗೆ ಮನೆ ಬಳಸಲು ಬಿಡುತ್ತಿರಲಿಲ್ಲ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮೃತ ಸುಷ್ಮಾ ಅವರ ಪೋಷಕರು ಆರೋಪಿಸಿದ್ದಾರೆ. ಸುಷ್ಮಾ ಅವರ ಪೋಷಕರು ನೀಡಿದ ವರದಕ್ಷಿಣೆ ಕಿರುಕುಳದ ದೂರಿನ ಮೇರೆಗೆ, ಬೆಂಗಳೂರು ಪೊಲೀಸರು ಪತಿ ಪುನೀತ್ ಅವರನ್ನು ಬಂಧಿಸಿದ್ದಾರೆ. ಘಟನೆಯ ನಂತರ ಅತ್ತೆ ಕಲ್ಪನಾ ಅವರು ನಾಪತ್ತೆಯಾಗಿದ್ದು, ಪೊಲೀಸರು ಅವರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.








