Friday, April 26, 2024
spot_imgspot_img
spot_imgspot_img

ಮೈಸೂರು ಅರಮನೆಯಲ್ಲಿ ವಿಜಯದಶಮಿ ಸಂಭ್ರಮ; ಇಂದು ಸಂಜೆ ಐತಿಹಾಸಿಕ ಜಂಬೂಸವಾರಿ

- Advertisement -G L Acharya panikkar
- Advertisement -
driving

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಇಂದು ಕೊನೆಯಾಗಲಿದೆ. ಮೈಸೂರು ಅರಮನೆಯಲ್ಲಿಂದು ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಇಂದು ಸಂಜೆ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ. ಮೈಸೂರು ಅರಮನೆಯಲ್ಲಿ ಇಂದು ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಆನೆ, ಕುದುರೆ, ಹಸುಗಳು ಕಲ್ಯಾಣ ಮಂಟಪಕ್ಕೆ ಆಗಮಿಸಿವೆ.

ಇಂದು ಬೆಳಗ್ಗೆ 6.13ರಿಂದ 6.32ರವರೆಗೆ ಪೂಜಾ ಕೈಂಕರ್ಯಗಳು ನಡೆದಿದ್ದು, 7.20ರಿಂದ ವಿಜಯದಶಮಿ‌ ಮೆರವಣಿಗೆ ಆರಂಭವಾಗಲಿದೆ. ಅರಮನೆಯ ಮುಖ್ಯದ್ವಾರದಿಂದ ಭುವನೇಶ್ವರಿ ದೇವಾಲಯದವರೆಗೂ ಮೆರವಣಿಗೆ ನಡೆಯಲಿದೆ. ಬೆಳ್ಳಿ ಪಲ್ಲಕ್ಕಿ, ಆನೆ, ಹಸು, ಕುದುರೆಯ ಮೆರವಣಿಗೆ ಸಾಗಲಿದೆ. ವಿಜಯದಶಮಿ‌ ಮೆರವಣಿಗೆಯಲ್ಲಿ ಸಾಗಲಿರುವ ಯುವರಾಜ ಯದುವೀರ್ ಒಡೆಯರ್ ದೇಗುಲದ ಆವರಣದಲ್ಲಿ ಬನ್ನಿಮರಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಒಂದು ಗಂಟೆ ಕಾಲ‌ ಪೂಜೆ ಸಲ್ಲಿಸಲಿರುವ ಯದುವೀರ್ ಪೂಜೆ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್ ತೆರಳಲಿದ್ದಾರೆ. ಈ‌ ಮೂಲಕ ಮೈಸೂರು ಅರಮನೆ ದಸರಾ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಈ ಬಾರಿಯೂ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಲಿದೆ. ಆದರೆ ಈ ಬಾರಿ ಉತ್ಸವ ಮೂರ್ತಿ ಮೆರವಣಿಗೆ ಇರಲಿದೆ. ಚಾಮುಂಡಿ ಬೆಟ್ಟದಲ್ಲಿ ಉತ್ಸವ ಮೂರ್ತಿಗೆ ಇಂದು ಬೆಳಗ್ಗೆ 8 ಗಂಟೆಗೆ ಮೈಸೂರು ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್ ಪೂಜೆ ಸಲ್ಲಿಸಲಿದ್ದಾರೆ. ಪೂಜೆ ಸಲ್ಲಿಕೆ ಬಳಿಕ ಅಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ಮೈಸೂರು ಅರಮನೆಗೆ ಕರೆತರಲಾಗುವುದು.

ನಾದಸ್ವರ, ವಿವಿಧ ಕಲಾತಂಡಗಳ ಜೊತೆಗೆ ಮೆರವಣಿಗೆ ನಡೆಯಲಿದ್ದು, ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಅಶ್ವದಳ, ಚಂಡೆ, ಭಜನಾ ತಂಡ, ವೇದಘೋಷ, ನವದುರ್ಗೆಯರ ಮೆರವಣಿಗೆ ಇರಲಿದೆ. ಚಾಮುಂಡಿಬೆಟ್ಟದಿಂದ ತಾವರಕಟ್ಟೆ, ಇಟ್ಟಿಗೆಗೂಡು, ಹಾರ್ಡಿಂಜ್ ವೃತ್ತದ ಮೂಲಕ ಅರಮನೆಗೆ ಮೆರವಣಿಗೆ ಆಗಮಿಸಲಿದೆ. ಇದೇ ಮೊದಲ ಬಾರಿಗೆ ಚಾಮುಂಡೇಶ್ವರಿ ಮೂರ್ತಿ ಮೆರವಣಿಗೆ ನಡೆಸಲಾಗುತ್ತಿದೆ.

ಜಂಬೂಸವಾರಿಗೆ ಸಿಎಂ ಚಾಲನೆ:
ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಕೊರೊನಾ ಹಿನ್ನೆಲೆ ಈ ಬಾರಿಯೂ ಸರಳವಾಗಿ ಜಂಬೂಸವಾರಿ ನಡೆಸಲಾಗುತ್ತದೆ. ಜಂಬೂಸವಾರಿ ಮೈಸೂರು ಅರಮನೆ ಆವರಣಕ್ಕೆ ಸೀಮಿತವಾಗಿರಲಿದೆ. ಜೋಡಿ ನಂದಿಧ್ವಜ ಸ್ತಂಭಕ್ಕೆ ಪೂಜೆ ಸಲ್ಲಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿ ಸಂಜೆ 4.36ರಿಂದ 4.46ರ ಶುಭ ಮೀನ ಲಗ್ನದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ಪೂಜೆ ಸಲ್ಲಿಸಲಿದ್ದಾರೆ. ಇದಾದ ನಂತರ ಜಂಬೂಸವಾರಿಗೆ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

ಇಂದು ಸಂಜೆ 5ರಿಂದ 5.30ರ ಶುಭ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಗೆ ಸಿಎಂ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ ಯದುವೀರ ಕೃಷ್ಣದತ್ತ ಒಡೆಯರ್ ಚಿನ್ನದ ಅಂಬಾರಿಯಲ್ಲಿರುವ ದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಸಚಿವ ಸೋಮಶೇಖರ್, ಮೇಯರ್ ಸುನಂದಾ ಪಾಲನೇತ್ರ, ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಭಾಗಿಯಾಗಲಿದ್ದಾರೆ.

- Advertisement -

Related news

error: Content is protected !!