ಕರಾವಳಿಯಲ್ಲಿ ನಾಗಾರಾಧನೆ..
ನಾಗಾರಾಧನೆ ಎಂಬುದು ಭಾರತೀಯ ಸಂಪ್ರದಾಯದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ನಾಗಾರಾಧನೆ ಅತ್ಯಂತ ಪವಿತ್ರ ಹಾಗೂ ಪೂಜನೀಯವೇನಿಸಿದೆ. ನಾಗಮೂಲದ ಆಧಾರದಲ್ಲಿಯೇ ಪ್ರತಿಯೊಂದು ಕೌಟುಂಬಿಕ ಮೌಲ್ಯ, ಆಚರಣೆಗಳು, ಸಂಪ್ರದಾಯಗಳು ಚಾಲ್ತಿಯಲ್ಲಿವೆ.
ಶ್ರಾವಣಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸುವ ನಾಗರ ಪಂಚಮಿ ಹಿಂದೂಗಳಿಗೆ ತುಂಬಾ ವಿಶೇಷ ಹಬ್ಬ. ನಾಗರ ಹಾವಿನೆಡೆಗೆ ಮನುಷ್ಯನ ಸಹಜ ಭಯ, ಭಕ್ತಿಯನ್ನು ತೋರಿಸಿಕೊಳ್ಳುವ ನಾಗರಪಂಚಮಿ ದಿನದಂದು ಹುತ್ತಕ್ಕೆ ಹಾಲೆರೆದರೆ ಒಳಿತಾಗುವುದು ಎನ್ನುವುದು ಸಂಪ್ರದಾಯ. ನಾಗರಪಂಚಮಿಯಂದು ವಿಷ್ಣುವಿನ ವಾಹನ ಶೇಷನಾಗನಿಗೆ ಸಲ್ಲಿಸುವ ಪೂಜೆ ಶ್ರೇಷ್ಠ. ಈ ದಿನ ನಾಗಪೂಜೆ ಮಾಡಿದರೆ ನಾಗದೋಷಕ್ಕೆ ಪರಿಹಾರ ಸಿಗುವುದು ಎಂಬ ನಂಬಿಕೆಯ ಮೂಲ ನಾಗರಪಂಚಮಿ.
ಅದರಲ್ಲೂ ನಮ್ಮ ಕರಾವಳಿ ಭಾಗದ ಮಾತೃ ಪ್ರಧಾನ ವ್ಯವಸ್ಥೆ ನಿಂತಿರುವುದೇ ಈ ನಾಗಾರಾಧನೆ ಮತ್ತು ನಾಗಮೂಲದ ಗುರುತಿಸುವಿಕೆಯ ಆಧಾರದಿಂದಲೇ. ಕರಾವಳಿಯಲ್ಲಿ ಹಿಂದೂಗಳ ಮೂಲ ಆರಾಧನೆ ನಾಗಾರಾಧನೆ. ಕರಾವಳಿ ಕರ್ನಾಟಕದ ಆರಾಧನಾ ಮಾರ್ಗದ ಚರಿತ್ರೆಯಲ್ಲಿ ನಾಗಾರಾಧನೆ ಬಹಳ ವಿಶೇಷವಾದುದು. ನಾಗದೇವರು ಕರಾವಳಿ ಭಾಗದ ಮೂಲ ದೇವರು. ಪ್ರತಿಯೊಂದು ಕುಟುಂಬವೂ ತನ್ನ ನಾಗಮೂಲವನ್ನು ಅರಸಿಕೊಂಡು ನಾಗಾರಾಧನೆ ಮಾಡಿಕೊಂಡು ಬರುವಲ್ಲಿ ಶ್ರದ್ಧೆ, ಭಕ್ತಿಯನ್ನು ತೋರುತ್ತಿದೆ.
ಕರಾವಳಿಯಲ್ಲಿ ನಾಗದೇವರನ್ನು ಮೂಲ ದೇವರನ್ನಾಗಿ ಯಾಕೆ ಪೂಜಿಸುತ್ತಾರೆ ಎಂಬುವುದಕ್ಕೆ ಅದರದೇ ಆದ ಪೌರಾಣಿಕ ಐತಿಹ್ಯವಿದೆ. ಪರಶುರಾಮ ದೇವರು ಸಮುದ್ರ ರಾಜನಿಂದ ತುಳುನಾಡನ್ನು ಪಡೆದುಕೊಂಡಾಗ ಅದು ಉಪಯೋಗಕ್ಕೆ ಬಾರದ ಬರಡು ಭೂಮಿಯಾಗಿತ್ತು. ಉಪ್ಪಿನ ಕೋಟೆಯಂತೆ ಇದ್ದ ಭೂಮಿಯನ್ನು ಸಮೃದ್ಧ ಭೂಮಿಯನ್ನಾಗಿಸಿ ಕೊಡಲು ಪರಶುರಾಮ ನಾಗ ರಾಜನನ್ನು ಬೇಡಿಕೊಳ್ಳುತ್ತಾನೆ. ಪರಶುರಾಮನ ಮೊರೆಯನ್ನು ಕೇಳಿದ ನಾಗಗಳು ತಮ್ಮ ದೇಹವನ್ನು ಪಣಕ್ಕೆ ಇಟ್ಟು ಉಪ್ಪಿನ ಕೋಟೆಯನ್ನು ಮೆಟ್ಟಿ ಪಾತಾಳದಿಂದ ಸಿಹಿನೀರು ತರುತ್ತವೆ. ಅಡಿಯಲ್ಲಿದ್ದ ಮೆಕ್ಕಲು ಮಣ್ಣನ್ನು ಬುಡಮೇಲು ಮಾಡುತ್ತವೆ.
ತುಳುನಾಡನ್ನು ಕಟ್ಟುವ ಕಾಯಕವನ್ನು ತಪಸ್ಸಾಗಿ ಸ್ವೀಕರಿಸಿದ ನಾಗಗಳು ಉಪ್ಪಿನ ಮೇಲೆ ಹರಿದಾಡಿದಾಗ ದೇಹಕ್ಕೆ ಗಾಯವಾಗುತ್ತದೆ. ಹೀಗೆ ಗಾಯವಾದ ಹಾವುಗಳಿಗೆ ತುಳುವರು ಉರಿಯ ಉಪಶಮನಕ್ಕೆ ಗೆಂದಾಲಿ ಎಲೆನೀರಲ್ಲಿ ಅಭಿಷೇಕ ಮಾಡುತ್ತಾರೆ. ಗಾಯಕ್ಕೆ ಅರಿಶಿನ ಹಚ್ಚಿ, ತಿಲಕವಿಟ್ಟು ಭಕ್ತಿಯಿಂದ ಆರತಿ ಮಾಡುತ್ತಾರೆ. ನಾಗನನ್ನು ತಮ್ಮ ಕುಲದೇವರಾಗಿ ಸ್ವೀಕರಿಸುತ್ತಾರೆ. ನಾಗನಿಗೆ ತುಳುವರು ಮಾಡಿದ ಆರೈಕೆ ಮುಂದೆ ಆಚರಣೆಯಾಗುತ್ತದೆ ಎಂಬುವುದು ತುಳುನಾಡಿನಲ್ಲಿ ನಾಗಾರಾಧನೆಯ ಬಗ್ಗೆ ಇರುವ ಪುರಾಣ.
ತುಳುನಾಡಿನಲ್ಲಿ ನಾಗಾರಾಧನೆ ಎಂದರೆ ಅದು ಪ್ರಕೃತಿಯ ಆರಾಧನೆ, ಭಯ ಭಕ್ತಿಗಳ, ನಂಬಿಕೆಯ ಆರಾಧನೆ. ಕುಟುಂಬದ ಮೂಲವನ್ನು ಹುಡುಕುವ ಆಶಯ. ಹೀಗೆ ಬೆಳೆದು ಬಂದ ನಾಗಾರಾಧನೆ ಪ್ರಾಣಿ ಮನುಷ್ಯನ ಸಂಬಂಧಗಳನ್ನು ಸೂಚಿಸುವಂತಹದು. ಕೃಷಿ, ಸಂತಾನ, ಆರೋಗ್ಯ ಹೀಗೆ ನಾನಾ ನಂಬಿಕೆಗಳಿಂದ ನಡೆದು ಬಂದಿರುವ ನಾಗಾರಾಧನೆ ತುಳುನಾಡಿನಲ್ಲಿ ಹೀಗೆಯೇ ಮುಂದುವರಿಯಲಿ.