ಮಂಗಳೂರು: ನಾಗಾರಾಧನೆ ಅಂದಾಗ ತಕ್ಷಣ ನೆನಪಿಗೆ ಬರೋದು ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ. ನಾಗ ದೇವರು ಹುಟ್ಟು ಪಡೆದ ಜಾಗ ಅಂತಾನೆ ಕರಾವಳಿ ಜಿಲ್ಲೆಯನ್ನ ಕರೆಯಲಾಗುತ್ತೆ. ಹೀಗಾಗಿಯೇ ಜಿಲ್ಲೆಯ ಜನ ದೈವ-ದೇವರ ಆರಾಧನೆಯ ಜೊತೆಗೆ ನಾಗ ದೇವರ ಆರಾಧನೆಗೆ ಹೆಚ್ಚಿನ ಆದ್ಯತೆಯನ್ನ ಕೊಡ್ತಾರೆ.
ಕರಾವಳಿ ನಾಗ ದೇವರ ವಾಸ ಸ್ಥಾನ. ವರ್ಷವಿಡೀ ನಾಗ ದೇವರ ಆರಾಧನೆಯಲ್ಲಿ ಇಲ್ಲಿನ ಜನ ತೊಡಗಿರ್ತಾರೆ. ಆದ್ರೆ ವರ್ಷದ ಮೊದಲ ಹಬ್ಬ ಅನಿಸಿಕೊಂಡಿರೋ ನಾಗರ ಪಂಚಮಿಯಂದು ದಕ್ಷಿಣ ಕನ್ನಡದಾದ್ಯಂತ ನಾಗ ದೇವರ ಆರಾಧನೆಯನ್ನ ವಿಶಿಷ್ಟವಾಗಿ ಮಾಡಲಾಗುತ್ತೆ. ನಾಗನಿಗೆ ಹಾಲು, ಸೀಯಾಳ ಅರ್ಪಿಸಿ ಭಕ್ತ ಸಮುದಾಯ ಭಕ್ತಿಯ ಸಾಗರದಲ್ಲಿ ಮಿಂದೇಳುತ್ತೆ.
ಶ್ರೀ ಕ್ಷೇತ್ರ ಕುಕ್ಕೆ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಪ್ರತಿ ವರ್ಷ ನಾಗರ ಪಂಚಮಿ ದಿನದಂದು ಬೆಳಗ್ಗಿನ ಜಾವವೇ ಭಕ್ತರು ಸಾಲಿನಲ್ಲಿ ನಿಲ್ಲುತ್ತಿದ್ದರು. ನಾಗ ದೇವರಿಗೆ ಸೇರಿದ ದೇವಸ್ಥಾನಗಳಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮೊದಲನೆಯ ಸ್ಥಾನದಲ್ಲಿದ್ದರೆ, ಕುಡುಪು ಪದ್ಮನಾಭ ಸ್ವಾಮಿ ದೇವಾಲಯ ಎರಡನೇ ಸ್ಥಾನದಲ್ಲಿದೆ.ಪ್ರತೀ ವರ್ಷ ನಾಗರಪಂಚಮಿ ಹಿನ್ನೆಲೆ ಲಕ್ಷಾಂತರ ಭಕ್ತರಿಂದ ಪೂಜೆ ಸಲ್ಲಿಕೆ ಆಗುತ್ತದೆ. ಈ ವರ್ಷ ಕೊರೊನಾ ಮಾಹಮಾರಿ ರೋಗದ ಹಿನ್ನೆಲೆಯಲ್ಲಿ ನಾಗರ ಪಂಚಮಿಯ ದಿನ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ.ಈ ನಿರ್ಬಂಧ ಹಿನ್ನೆಲೆ ಕ್ಷೇತ್ರದ ಆವರಣಕ್ಕೆ ಭಕ್ತಾದಿಗಳು ಬರುವಂತಿಲ್ಲ.
ಈ ವರ್ಷ ಅರ್ಚಕರು ಮಾತ್ರ ನಾಗ ದೇವರಿಗೆ ಹಾಲು ಎರೆಯಲಿದ್ದಾರೆ. ಎಲ್ಲ ದೇವಾಲಯಗಳಲ್ಲೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಸರಳವಾಗಿ ನಡೆಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಮನೆಗಳ ನಾಗಬನಗಳಲ್ಲಿ ಕುಟುಂಬಸ್ಥರು ಮಾತ್ರ ಜತೆಯಾಗಿ ಹೆಚ್ಚು ಜನ ಸೇರದೆ ಹಾಲು ಎರೆಯಲು ಅವಕಾಶ ಕಲ್ಪಿಸಲಾಗಿದೆ. ಹೂವು, ಸಿಯಾಳ, ಕೇದಗೆ, ಹಿಂಗಾರಕ್ಕೆ ಬೇಡಿಕೆ ಇಲ್ಲದ ಕಾರಣ ಕಳೆದ ವರ್ಷಕ್ಕೆ ಹೋಲಿಸಿದರೆ ದರವೂ ಕಡಿಮೆಯಾಗಿದೆ. ನಾಗರ ಪಂಚಮಿಯಂದು ನಾಗನಕಟ್ಟೆಗೆ ಹಾಲಿನ ಜತೆ ಗೆಂದಾಳಿ ಸೀಯಾಳ ಅರ್ಪಣೆ ಮಾಡುವುದು ಸಂಪ್ರದಾಯ. ಪ್ರತಿ ವರ್ಷ ತಮಿಳುನಾಡಿನಿಂದ ಗೆಂದಾಳಿ ಸೀಯಾಳ ಕರಾವಳಿಗೆ ಬರುತ್ತದೆ. ಈ ವರ್ಷ ಕೊರೊನಾ ರೋಗದ ಸಮಸ್ಯೆಯಿಂದ ಇದರ ಪ್ರಮಾಣ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಪ್ರತಿ ವರ್ಷ ನಾಗರಪಂಚಮಿಯಂದು ಕುಕ್ಕೆಯಲ್ಲಿ ಲಕ್ಷಾಂತರ ಭಕ್ತರು ಬಂದು ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ವರ್ಷ ಕೊರೊನಾ ಭೀತಿಯಿಂದ ದೇಗುಲದ ಅರ್ಚಕರಿಂದ ಪೂಜೆ ನಡೆಯಲಿದೆ. ಭಕ್ತರ ಪರವಾಗಿ ಅರ್ಚಕರೇ ಸಂಪ್ರದಾಯದಂತೆ ಪೂಜೆ ನೆರೆವೇರಿಸಲಿದ್ದಾರೆ. ಹೀಗಾಗಿ ಭಕ್ತರು ಅವರವರ ಮನೆಯ ನಾಗನಕಟ್ಟೆಗೆ ಪೂಜೆ ಸಲ್ಲಿಸಿ ಎಂದು ಮನವಿ ಮಾಡಿದ್ದಾರೆ.