ಬೆಂಗಳೂರು: ರಾಜ್ಯದಲ್ಲಿ ಡಿಪ್ಲೋಮಾ, ಇಂಜಿನಿಯರಿಂಗ್, ಡಿಗ್ರಿ ತರಗತಿಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ನಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜ್ಯದ ಡಿಪ್ಲೋಮಾ, ಇಂಜಿನಿಯರಿಂಗ್ ಪದವಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು. ಉಳಿದೆಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದಿಲ್ಲ ಎಂದು ಮಾಹಿತಿ ನೀಡಿದರು.
ಖಾಸಗಿ, ಸರ್ಕಾರಿ ವಿವಿಗಳಿಗೆ ಪರೀಕ್ಷೆ ನಡೆಸಲು ಅವಕಾಶ:
ಖಾಸಗಿ, ಸರ್ಕಾರಿ ವಿವಿಗಳಿಗೆ ಪರೀಕ್ಷೆ ನಡೆಸಲು ಅವಕಾಶ ನೀಡಲಾಗಿದೆ. ಈ ವರ್ಷ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮುಂದಿನ ವರ್ಷ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಪ್ರಥಮ ಮತ್ತು ದ್ವಿತೀಯ ಡಿಪ್ಲೋಮಾ, ಇಂಜಿನಿಯರಿಂಗ್, ಡಿಗ್ರಿ ತರಗತಿ ವಿದ್ಯಾರ್ಥಿಗಳ ಇಂಟರ್ ನಲ್ ಅಸೆಸ್ಮೆಂಟ್ ಆಧರಿಸಿ ಹಾಗೂ ಹಿಂದಿನ ತರಗತಿ ಫಲಿತಾಂಶ ಆಧರಿಸಿ ಮುಂದಿನ ತರಗತಿಗೆ ಪ್ರವೋಟ್ ಮಾಡಲಾಗುವುದು ಎಂದರು.
ಜುಲೈ 30, 31 ರಂದು ಸಿಇಟಿ ಪರೀಕ್ಷೆ:
ಇನ್ನು ಸಿಇಟಿ ಪರೀಕ್ಷಾ ದಿನಾಂಕದಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಹಿಂದೆ ಘೋಷಣೆ ಮಾಡಿದಂತೆ ಇದೇ ತಿಂಗಳ 30, 31 ರಂದು ಪರೀಕ್ಷೆ ನಡೆಸಲಾಗುವುದು. ಪಿಜಿ ಸಿಇಟಿ ಪರೀಕ್ಷೆ ಆ.8 ಮತ್ತು 9 ರಂದು ನಡೆಯಲಿದೆ. ಡಿಪ್ಲೋಮಾ ಸಿಇಟಿ ಆ.9ರಂದು ನಡೆಯಲಿದೆ. ಸಿಇಟಿ ಪರೀಕ್ಷೆಗೆ ಸಹಾಯವಾಣಿ ತೆರೆಯಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಸೆಪ್ಟೆಂಬರ್ ನಲ್ಲಿ ಆನ್ ಲೈನ್ ಕ್ಲಾಸ್ ಆರಂಭ:
ಸೆಪ್ಟೆಂಬರ್ ಮೊದಲ ದಿನದಿಂದ ಶೈಕ್ಷಣಿಕ ವರ್ಷದ ತರಗತಿಗಳು ಆನ್ ಲೈನ್ ತರಗತಿ ಮೂಲಕ ಆರಂಭವಾಗಿರುತ್ತದೆ. ನಂತರ ನವೆಂಬರ್ ನಿಂದ ರೆಗ್ಯುಲರ್ ತರಗತಿಗಳು ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದರು.