



ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ರೀಲ್ಸ್ ಗಳು ರಾತ್ರೋ ರಾತ್ರಿ ವೈರಲ್ ಆಗಿ ಹಲವು ಕಲಾವಿದರು ಪ್ರಸಿದ್ಧರಾಗುತ್ತಾರೆ. ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೇ ನೋಡಿದರೂ ನಂದಿನಿಯದೇ ಹವಾ ಸೃಷ್ಟಿಯಾಗಿದೆ. ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು, ನಾನು ನಂದಿನಿ..ಬೆಂಗಳೂರಿಗೆ ಬಂದೀನಿ ಅನ್ನೋ ರೀಲ್ಸ್ ಸಖತ್ ಸೌಂಡ್ ಮಾಡುತ್ತಿದ್ದು, ಜನರು ಫಿದಾ ಆಗಿದ್ದಾರೆ.
ಸಣ್ಣ ಊರುಗಳಿಂದ ದೂರದ ಬೆಂಗಳೂರಿಗೆ ಕನಸನ್ನು ಕಟ್ಟಿಕೊಂಡು ಬಂದು ಪಿಜಿಯಲ್ಲಿ ಉಳಿಯುವ ಹೆಣ್ಣು ಮಕ್ಕಳು ವಾಸ್ತವ ಹೇಗಿರುತ್ತೆ. ಕನ್ನಡ ಮೀಡಿಯಂನಲ್ಲಿ ಓದಿ ಇಂಗ್ಲೀಷ್ ಬಾರದೇ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಈ ಹಾಡು ತೆರೆದಿಟ್ಟಿದೆ.

ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ ಖ್ಯಾತಿಯ ವಿಕ್ಕಿ ಎಂಬುವವರು. ಸಾಮಾಜಿಕ ಜಾಲತಾಣದಲ್ಲಿ ಇವರು ಮುದ್ದುಕುಮಾರ ಎಂದೇ ಫೇಮಸ್. ಇವರು ಸಾಕಷ್ಟು ಹಾಸ್ಯದ ವೀಡಿಯೋಗಳನ್ನು ಇವರು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದು, ಅವುಗಳಲ್ಲಿ ಕೆಲವೊಂದು ಸಾಕಷ್ಟು ವೈರಲ್ ಕೂಡ ಆಗಿವೆ. ಸಹ ಕಲಾವಿದರಾದ ಅಮಿತ್ ಚಿಟ್ಟೆ, ಶಾಯನ್ ಭಟ್ಟಾಚಾರ್ಯರೊಂದಿಗೆ ಮನರಂಜನೆಯ ಮೂಲಕ ನೋಡುಗರಲ್ಲಿ ವಿವೇಚನೆಯನ್ನೂ ಹುಟ್ಟುಹಾಕುವ ಸೃಜನಶೀಲ ಕಲಾವಿದ ವಿಕಾಸ. ಇದೀಗ ಇವರು ಮಾಡಿದ ಹೊಸ ಕಾಮಿಡಿ ರೀಲ್ಸ್ 5 ಮಿಲಿಯನ್ಗಿಂತಲೂ ಹೆಚ್ಚು ಜನರನ್ನು ತಲುಪಿ ಹೊಸ ಸಂಚಲನವನ್ನು ಉಂಟುಮಾಡಿದೆ. ‘I am barbie girl’ ಎಂಬ ಇಂಗ್ಲಿಷ್ ಹಾಡಿನ ಟ್ಯೂನ್ಗೆ ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ ಎಂಬ ಸಾಹಿತ್ಯ ರಚಿಸಿ ಹಾಡಿದ್ದಾರೆ.
ಕೆಲ ದಿನಗಳ ಹಿಂದೆ ‘ಅನ್ಯಾಯಕಾರಿ ಬ್ರಹ್ಮ ‘ ರೀಲ್ಸ್ ಮೂಲಕ ಅದರ ಮೂಲ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ನಾಡಿನಾದ್ಯಂತ ಮನೆ ಮಾತಾದರು. ಈಗ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಎಂಬ ರೀಲ್ಸ್ ಸಖತ್ ಸೌಂಡ್ ಮಾಡುತ್ತಿದೆ.