



ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸುಮಾರು 552 ಜನ ಸಾವನ್ನಪ್ಪಿದ್ದು, ಈ ಭೀಕರ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ನಾವು ಸಮರ್ಥರಾಗಿದ್ದೇವೆ. ವಿದೇಶಗಳ ಸಹಾಯದ ಅಗತ್ಯ ಇಲ್ಲ ಎಂದು ನೇಪಾಳ ಸರ್ಕಾರ ತಿಳಿಸಿದೆ.
ಭಾರತದ ಎನ್‌ಡಿಆರ್‌ಎಫ್, ಚೀನಾ, ಅಮೆರಿಕ ಸಹಾಯ ಹಸ್ತವನ್ನು ನೇಪಾಳ ನಿರಾಕರಿಸಿದೆ. ಈ ನಡುವೆ ಯುಕೆ, ಜಪಾನ್, ದಕ್ಷಿಣ ಕೊರಿಯಾ, ಶ್ರೀಲಂಕಾ, ಬಾಂಗ್ಲಾದೇಶದಿಂದಲೂ ಸಹಾಯದ ಭರವಸೆ ಕೇಳಿಬಂದಿದೆ. ಆದರೆ ಸದ್ಯಕ್ಕೆ ಸಹಾಯ ಬೇಡ, ಸಾಧ್ಯವಾದರೆ ಹಣಕಾಸಿನ ನೆರವು ನೀಡಿ ಎಂದು ನೇಪಾಳ ಸರ್ಕಾರ ಮನವಿ ಮಾಡಿದೆ.
ಇದರ ನಡುವೆ, ನೇಪಾಳದ ವಿನಂತಿಯ ಮೇರೆಗೆ ಭಾರತ ಸರ್ಕಾರ ವೈದ್ಯಕೀಯ ನೆರವು, ಎಂಜಿನಿಯರಿಂಗ್ ತಂಡಗಳನ್ನು ಕಳುಹಿಸಲು ಮತ್ತು ಹಾನಿಗೊಳಗಾದ ಮೂಲಸೌಕರ್ಯವನ್ನು ಪುನಃಸ್ಥಾಪನೆಗೆ ಸಹಾಯ ಮಾಡಲು ಮುಂದಾಗಿದ್ದು, ಹೆಚ್ಚುವರಿ ಮಾನವೀಯ ಸಹಾಯಕ್ಕಾಗಿ ಸಿದ್ಧತೆ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯ(ಎಂಇಎ) ತಿಳಿಸಿದೆ.
ಈಗಾಗಲೇ ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತದ ಎರಡು ವಿಮಾನಗಳು ನೇಪಾಳಕ್ಕೆ ತಲುಪಿವೆ. ಇನ್ನೊಂದು ವಿಮಾನ ಶೀಘ್ರದಲ್ಲೇ ನೇಪಾಳಕ್ಕೆ ತಲುಪಲಿದೆ. ಇದರೊಂದಿಗೆ ಸುರಂಗ ರಕ್ಷಣಾ ತಂಡವನ್ನು ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ಮೊದಲು ಒಂದು ಪರಿಶೀಲನಾ ತಂಡವನ್ನು ಕಳುಹಿಸಲಾಗುತ್ತಿದೆ. ವೈದ್ಯಕೀಯ ತಂಡವನ್ನು ಸಹ ಕಳುಹಿಸುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸಲು ನಾವು ನೇಪಾಳದ ಅಧಿಕಾರಿಗಳಿಗೆ ಪ್ರಸ್ತಾಪವನ್ನು ನೀಡಿದ್ದೇವೆ. ಈ ನಿಟ್ಟಿನಲ್ಲಿ ನೇಪಾಳ ಸರ್ಕಾರದಿಂದ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ. ನೇಪಾಳ ಅಧಿಕಾರಿಗಳಿಗೆ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನೇಪಾಳದ ವಿದೇಶಾಂಗ ಸಚಿವಾಲಯದ ವಕ್ತಾರ ಲೋಕ್ ಬಹದ್ದೂರ್ ಛೆಟ್ರಿ, ನಮಗೆ ಸಹಾಯದ ಅಗತ್ಯವಿಲ್ಲ ಎಂದಲ್ಲ. ಆದರೆ ನಮ್ಮ ಭದ್ರತಾ ವ್ಯವಸ್ಥೆ ಈಗ ಸಮರ್ಥವಾಗಿದ್ದು, ನೇಪಾಳಕ್ಕೆ ಯಾವುದೇ ವಿಶೇಷ ಸಹಾಯ ಅಥವಾ ಪರಿಣತಿಯ ಅಗತ್ಯವಿದ್ದರೆ ನಾವು ಕೇಳುತ್ತೇವೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.








