
ಬೆಂಗಳೂರು: ‘ಇನ್ನು ಆರೇಳು ತಿಂಗಳಲ್ಲಿ ಗಡ್ಡಧಾರಿ ವ್ಯಕ್ತಿಯೊಬ್ಬರು ಕರ್ನಾಟಕ ರಾಜ್ಯದ ಸಿಎಂ ಆಗಲಿದ್ದಾರೆ ಎಂದು ವಿಜಯನಗರದ ಸುಕ್ಷೇತ್ರ ಮೈಲಾರದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಭವಿಷ್ಯವಾಣಿ ನುಡಿದಿದ್ದಾರೆ. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಮೈಲಾರದ ಭವಿಷ್ಯವಾಣಿಯಂತೆ ಈಗಿರುವ ಸರ್ಕಾರದಲ್ಲಿ ಮೂವರು ಸಿಎಂ ಆಗಿ ಮುಕ್ತಾಯ ಆಗುತ್ತೆ. ಇನ್ನು ಕೆಲವೇ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಆಗುವುದು ಖಚಿತ. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ಅವರು 6-7 ತಿಂಗಳು ಮಾತ್ರ ರಾಜ್ಯಭಾರ ಮಾಡ್ತಾರೆ. 2022ರ ಮಾರ್ಚ್‌ನಲ್ಲಿ ಗಡ್ಡಧಾರಿ ವ್ಯಕ್ತಿ ಸಿಎಂ ಆಗ್ತಾರೆ ಎಂದು ಮೈಲಾರಲಿಂಗೇಶ್ವರನ ಭವಿಷ್ಯವಾಣಿ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿ ಟಿ ರವಿ ‘ಸಿಎಂ ಆಗೋಕೆ ಯೋಗಬೇಕು. ಅದು ಬೊಮ್ಮಾಯಿ ಅವರಿಗೆ ಇದೆ. ನಾನು ಸಿಎಂ ಆಗಲು ಗಡ್ಡ ಬಿಟ್ಟಿಲ್ಲ. ಗಡ್ಡ ಬಿಟ್ಟಾಕ್ಷಣ ಸಿಎಂ ಆಗಲ್ಲ, ನನಗೆ ಕಾಲೇಜು ದಿನಗಳಿಂದಲೂ ಗಡ್ಡ ಬಿಡುವ, ಹಣೆಗೆ ಕುಂಕುಮ ಇಡುವ, ಕಿವಿಗೆ ಟಿಕ್ಕಿ ಹಾಕುವ ಹವ್ಯಾಸ ಇದೆ. ಗಡ್ಡ ಬಿಟ್ಟಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿ. ನನ್ನನ್ನು ನೋಡಿದಾಕ್ಷಣ ಸಿಟಿ ರವಿ ಎಂಬುದು ಗೊತ್ತಾಗಲಿ ಎಂದೇ ನಾನು ಹೀಗಿರುವೆ’ ಎಂದಿದ್ದಾರೆ.

