Sunday, May 19, 2024
spot_imgspot_img
spot_imgspot_img

ಏರ್ ಇಂಡಿಯಾದ ಸರ್ವರ್ ಮೇಲೆ ಸೈಬರ್ ಹ್ಯಾಕ್; ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆ!

- Advertisement -G L Acharya panikkar
- Advertisement -

ನವದೆಹಲಿ: ಏರ್ ಇಂಡಿಯಾದ ‘ಡಾಟಾ ಪ್ರೊಸೆಸರ್ ಆಫ್ ಪ್ಯಾಸೆಂಜರ್ ಸರ್ವಿಸ್ ಸಿಸ್ಟಂ’ನಲ್ಲಿ ಸೈಬರ್ ದಾಳಿಯಾಗಿದ್ದು, ಸುಮಾರು 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಹ್ಯಾಕ್ ಮಾಡಲಾಗಿದೆ. ಈ ಸರ್ವರ್ ಅನ್ನು ತಂತ್ರಜ್ಞಾನ ಪೂರೈಕೆ ಸಂಸ್ಥೆ ಎಸ್‌ಐಟಿಎ(ಸಿಟಾ) ನಿರ್ವಹಿಸುತ್ತದೆ.

ಆಗಸ್ಟ್ 26, 2011 ಮತ್ತು ಫೆಬ್ರವರಿ 20, 2021 ರ ನಡುವೆ ನೋಂದಾಯಿಸಿದ ಪ್ರಯಾಣಿಕರ ವೈಯಕ್ತಿಕ ಡಾಟಾ (ಹೆಸರು, ಸಂಪರ್ಕ, ಪಾಸ್‌ಪೋರ್ಟ್ ಮಾಹಿತಿ, ಟಿಕೆಟ್ ಮಾಹಿತಿ, ಕ್ರೆಡಿಟ್ ಕಾರ್ಡ್ ವಿವರಗಳು) ಸೋರಿಕೆಯಾಗಿವೆ ಎಂದು ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಕ್ರೆಡಿಟ್ ಕಾರ್ಡ್ ಹೊಂದಿರುವವರ ಸಿವಿವಿ / ಸಿವಿಸಿ ಮಾಹಿತಿಯನ್ನು ಸಿಟಾ ಪಿಎಸ್‌ಎಸ್‌ನಲ್ಲಿ ಸಂಗ್ರಹಿಸಲಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.

‘ಪ್ರಯಾಣಿಕರ ಸೇವಾ ವ್ಯವಸ್ಥೆಯ ನಮ್ಮ ಡಾಟಾ ಪ್ರೊಸೆಸರ್ (ಪ್ರಯಾಣಿಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಜವಾಬ್ದಾರಿಯನ್ನು ಹೊಂದಿರುವ) ಸಿಟಾ ಪಿಎಸ್ಎಸ್ ಸರ್ವರ್ ಇತ್ತೀಚೆಗೆ ಸೈಬರ್ ದಾಳಿಗೆ ತುತ್ತಾಗಿದ್ದು, ಕೆಲವು ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ವಿಶ್ವದ ಸುಮಾರು 45,00,000 ಪ್ರಯಾಣಿಕರ ಡೇಟಾ ಸೋರಿಕೆ ಆಗಿದೆ’ ಎಂದು ಏರ್ ಇಂಡಿಯಾ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಡಾಟಾ ಭದ್ರತಾ ಲೋಪದ ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ. ಸೈಬರ್ ದಾಳಿಗೊಳಗಾಗಿರುವ ಸರ್ವರ್‌ಗಳನ್ನು ಭದ್ರಪಡಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಅಲ್ಲದೆ, ದತ್ತಾಂಶ ಭದ್ರತಾ ಲೋಪದ ಬಗ್ಗೆ ಪರಿಶೀಲನೆಗೆ ಬಾಹ್ಯ ತಜ್ಞರನ್ನು ತೊಡಗಿಸಿಕೊಂಡಿದ್ದು, ಈ ಬಗ್ಗೆ ಗ್ರಾಹಕರಿಗೆ ತಿಳಿಸಲು ಕ್ರೆಡಿಟ್ ಕಾರ್ಡ್ ನೀಡಿರುವ ಬ್ಯಾಂಕ್‌ಗಳಿಗೆ ಮಾಹಿತಿ ತಲುಪಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

‘ದಾಳಿಗೊಳಗಾದ ಸರ್ವರ್‌ಗಳನ್ನು ಭದ್ರಪಡಿಸಿದ ನಂತರ ಯಾವುದೇ ಅಸಹಜ ಚಟುವಟಿಕೆ ಕಂಡುಬಂದಿಲ್ಲ ಎಂದು ನಮ್ಮ ಡೇಟಾ ಪ್ರೊಸೆಸರ್ ಖಚಿತಪಡಿಸಿದೆ’ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಫೆಬ್ರವರಿ 25 ರಂದು ಡೇಟಾ ಲೀಕ್‌ಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ನಮಗೆ ಮಾಹಿತಿ ಸಿಕ್ಕಿತ್ತು. ಆದರೆ, ನಿರ್ದಿಷ್ಟವಾಗಿ ಯಾವ ಡೇಟಾ ಹ್ಯಾಕ್ ಆಗಿದೆ ಎಂಬ ಬಗ್ಗೆ ಡೇಟಾ ಪ್ರೊಸೆಸರ್ ಮಾರ್ಚ್ 25 ಮತ್ತು ಏಪ್ರಿಲ್ 5ರ ನಡುವೆ ಮಾಹಿತಿ ಹಂಚಿಕೊಂಡಿದೆ ಎಂದು ತಿಳಿಸಿದೆ.

ಇದೇವೇಳೆ, ಏರ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಮತ್ತು ಬೇರೆಲ್ಲಿಯಾದರೂ ಇದಕ್ಕೆ ಅನ್ವಯವಾಗುವ ಪಾಸ್‌ವರ್ಡ್‌ಗಳನ್ನು ಹೊಂದಿದ್ದರೆ ಕೂಡಲೇ ಬದಲಾಯಿಸುವಂತೆ ಪ್ರಯಾಣಿಕರಿಗೆ ಏರ್ ಇಂಡಿಯಾ ವಿನಂತಿ ಮಾಡಿಕೊಂಡಿದೆ.

- Advertisement -

Related news

error: Content is protected !!