

ಭಾರತೀಯ ಜನತಾ ಪಕ್ಷದ ಮಿತ್ರಪಕ್ಷಗಳು ಬಿಜೆಪಿ ನಾಯಕ ಮತ್ತು ನಿರ್ಗಮಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಾಯಕರಾಗಿ ಮತ್ತು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಅನುಮೋದಿಸಿವೆ. ಜನತಾ ದಳ ನಾಯಕ ಎಚ್‌ಡಿ ಕುಮಾರಸ್ವಾಮಿ, ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು, ಜನತಾ ದಳ ನಾಯಕ ನಿತೀಶ್ ಕುಮಾರ್, ಶಿವಸೇನೆಯ ಏಕನಾಥ್ ಶಿಂಧೆ, ಎನ್‌ಸಿಪಿಯ ಅಜಿತ್ ಪವಾರ್, ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್, ಜನಸೇನಾ ಪಕ್ಷದ ಪವನ್ ಕಲ್ಯಾಣ್, ಹಿಂದೂಸ್ತಾನಿ ಅವಾಮ್ ಮೋರ್ಚಾದ ಜಿತನ್ ರಾಮ್ ಮಾಂಝಿ ಮತ್ತು ಅಪ್ನಾ ದಳ (ಎಸ್) ಪಕ್ಷದ ಅನುಪ್ರಿಯಾ ಪಟೇಲ್ ಮೋದಿಯನ್ನು ಅನುಮೋದಿಸಿದರು.

ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಸಭೆಯಲ್ಲಿ ಮಾತನಾಡಿ “ಆಂಧ್ರಪ್ರದೇಶದಲ್ಲಿ ನಾವು ಮೂರು ಸಾರ್ವಜನಿಕ ಸಭೆಗಳನ್ನು ಮತ್ತು ಒಂದು ದೊಡ್ಡ ರ್ಯಾಲಿಯನ್ನು ನಡೆಸಿದ್ದೇವೆ. ಆಂಧ್ರಪ್ರದೇಶದ ಚುನಾವಣೆ ಗೆಲ್ಲುವಲ್ಲಿ ಭಾರಿ ಬದಲಾವಣೆ ತಂದಿದೆ. ಮೋದಿ ಅವರ ನಾಯಕತ್ವದಲ್ಲಿ ಮುಂದಿನ ಐದು ವರ್ಷಗಳಲ್ಲಿ ಭಾರತ ಜಗತ್ತಿನ 1 ಅಥವಾ 2ನೇ ಅತೀ ದೊಡ್ಡ ಆರ್ಥಿಕತೆ ದೇಶವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಸಭೆಯಲ್ಲಿ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಮಾತನಾಡಿ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮ್ಮ ಪಕ್ಷ ಎಲ್ಲಾ ಸಂದರ್ಭದಲ್ಲೂ ಪ್ರಧಾನಿ ಮೋದಿ ಜತೆಗಿರಲಿದೆ ಎಂದು ಭರವಸೆ ನೀಡಿದರು.