



ಪುತ್ತೂರು: ಇಂದು ಬೆಳ್ಳಂಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಈ ದಾಳಿಯಲ್ಲಿ ಪುತ್ತೂರಿನ ನಾಲ್ವರನ್ನು ಎನ್ಐಎ ಅಧಿಕಾರಿಗಳು ಬಂಧಿಸಿ ಕರೆದೊಯ್ದಿದ್ದಾರೆ. ಮಹಮ್ಮದ್ ಹ್ಯಾರೀಸ್ ಕುಂಬ್ರ (32), ಸಜ್ಜದ್ ಹುಸೈನ್, ಕೋಡಿಂಬಾಡಿ (37), ಫೈಜಲ್ ಅಹಮ್ಮದ್, ತಾರಿಗುಡ್ಡೆ, ಸಂಶುದ್ಧೀನ್ ಕೂರ್ನಡ್ಕ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಗೆ ಪಿಎಫ್ಐ ಲಿಂಕ್ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ವರ್ಷ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಆಧಿಕಾರಿಗಳ ನೆರವು ಪಡೆದು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಇಂದು ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ದಿಢೀರ್ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳೀಯ ಪೊಲೀಸರ ನೆರವು ಪಡೆದು ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭಯೋತ್ಪಾದಕ ಕೃತ್ಯಕ್ಕಾಗಿ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ರವಾನೆ ಆಗುತ್ತಿರುವ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ದಕ್ಷಿಣ ಭಾರತದಲ್ಲಿ ಬೇರು ಬಿಟ್ಟಿರುವ ಪಿಎಫ್‌ಐ ಹವಾಲಾ ಹಣದ ಜಾಲ ಬೆನ್ನತ್ತಿರುವ ಎನ್‌ಐಎ ತಂಡ ಕಳೆದೊಂದು ವರ್ಷದಲ್ಲಿ ತನಿಖೆ ನಡೆಸುತ್ತಿದೆ.
ಎರಡು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದ ಎನ್‌ಐಎ ಅಧಿಕಾರಿಗಳು ತನಿಖೆಯ ಜಾಡು ಹಿಡಿದು ದಾಳಿ ನಡೆಸಿದ್ದರು. ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಡದ ಸಫ್ರ್ರಾಜ್ ನವಾಜ್, ಇಟ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ಮತ್ತು ಕೇರಳದ ಕಾಸರಗೋಡಿನ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಎಂಬಾತನನ್ನು ಬಂಧಿಸಲಾಗಿತ್ತು.