Tuesday, July 21, 2026
spot_imgspot_img
spot_imgspot_img

ನೈಟ್‌ಕ್ಲಬ್ ಮಾಲೀಕರಿಗೆ ಸದ್ಯಕ್ಕಿಲ್ಲ ಜಾಮೀನು – ನಿರೀಕ್ಷಣಾ ಜಾಮೀನು ಅರ್ಜಿ ನಿರಾಕರಣೆ ಮಾಡಿದ ಕೋರ್ಟ್

- Advertisement -
- Advertisement -

ಹೊಸದಿಲ್ಲಿ, ಡಿ. 10: ಗೋವಾದ ‘ಬರ್ಚ್ ಬೈ ರೋಮಿಯೊ ಲೇನ್ ನೈಟ್‌ಕ್ಲಬ್ ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂತ್ರಾ ಸಹೋದರರಿಗೆ ತಕ್ಷಣ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ದಿಲ್ಲಿಯ ನ್ಯಾಯಾಲಯವೊಂದು ಬುಧವಾರ ನಿರಾಕರಿಸಿದೆ.

ಈ ನೈಟ್‌ಕ್ಲಬ್ ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ.

ಪ್ರಯಾಣದ ವೇಳೆ ತಮ್ಮನ್ನು ಬಂಧಿಸದಂತೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿ ಬೆಂಕಿ ಅವಘಡ ಪ್ರಕರಣದ ಆರೋಪಿಗಳಾದ ಲೂತ್ರಾ ಸಹೋದರರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ದಿಲ್ಲಿಯ ರೋಹಿಣಿ ನ್ಯಾಯಾಲಯ ಗೋವಾ ಸರಕಾರಕ್ಕೆ ನೋಟಿಸ್‌ ನೀಡಿತು.

ನ್ಯಾಯಾಲಯವು ಅರ್ಜಿಯ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ತಾವು ಭಾರತಕ್ಕೆ ಮರಳಿ ನಿರೀಕ್ಷಣಾ ಜಾಮೀನು ಪಡೆಯಲು ಗೋವಾದ ನ್ಯಾಯಾಲಯಗಳಿಗೆ ಹೋಗಲು ಬಯಸಿದ್ದೇವೆ ಎಂಬುದಾಗಿ ಲೂತ್ರಾ ಸಹೋದರರು ತಮ್ಮ ವಕೀಲರಾದ ಸಿದ್ದಾರ್ಥ ಲೂತ್ರಾ ಮತ್ತು ತನ್ನೀರ್ ಅಹ್ಮದ್ ಮಿ‌ರ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ತಾವು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗುವ ಭೀತಿಯನ್ನು ಎದುರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಹಾಗಾಗಿ, ಭಾರತಕ್ಕೆ ಬಂದು ಗೋವಾದ ನ್ಯಾಯಾಲಯಗಳಿಗೆ ಹೋಗಲು ಸಾಧ್ಯವಾಗುವಂತಾಗಲು ತಮಗೆ ಬಂಧನದಿಂದ ರಕ್ಷಣೆ ಬೇಕು ಎಂದು ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.

ಘಟನೆಯ ಹೊಣೆಯನ್ನು ತಮ್ಮ ಮೇಲೆ ಹೊರಿಸುವಂತಿಲ್ಲ ಎಂದು ವಾದಿಸಿರುವ ಅವರು, ಕ್ಲಬ್‌ನ ಸ್ಥಳೀಯ ಮ್ಯಾನೇಜರ್ ಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ತಾವು ಈ ಕ್ಲಬ್‌ನ ಮಾಲೀಕರಲ್ಲ ಪರವಾನಿಗೆದಾರರು ಮಾತ್ರ ಎಂದಿರುವ ಅವರು, ಸರಕಾರವು ತಮ್ಮನ್ನು “ಬೇಟೆಯಾಡುತ್ತಿದೆ” ಎಂದು ಹೇಳಿಕೊಂಡಿದ್ದಾರೆ.

ಸೌರಭ್ ಮತ್ತು ಗೌರವ್ ಲೂತ್ರಾ ಈಗ ಥಾಯ್ಲೆಂಡ್ ನ ಫುಕೆಟ್ ನಗರದಲ್ಲಿದ್ದಾರೆ. ಶನಿವಾರ ರಾತ್ರಿ ಬೆಂಕಿ ದುರಂತ ನಡೆದ ಬೆನ್ನಿಗೇ ರವಿವಾರ ಮುಂಜಾನೆ ಅವರು ವಿದೇಶಕ್ಕೆ ಪಲಾಯನಗೈದಿದ್ದಾರೆ.

ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸುವುದಕ್ಕಾಗಿ ಭಾರತೀಯ ಅಧಿಕಾರಿಗಳು ಥಾಯ್ಲೆಂಡ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆಂದು ತಿಳಿದುಬಂದಿದೆ.

- Advertisement -

Related news

error: Content is protected !!