



ಬೆಳ್ತಂಗಡಿ: ಮಕ್ಕಳ ಜೊತೆಗಿನ ಅಸಮದಾನದಿಂದ ಮನೆ ಬಿಟ್ಟು ಬಂದಿದ್ದ ವೃದ್ಧರೊಬ್ಬರು ಧರ್ಮಸ್ಥಳದ ಖಾಸಗಿ ವಸತಿಗೃಹದಲ್ಲಿ ಆತ್ಮಹತ್ಯೆಗೆ ಯತ್ನಿಸಿ ಬಳಿಕ ಮಂಗಳೂರು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಮೂಲತಃ ಬೆಂಗಳೂರಿನ ಹೊಯ್ಸಳ ನಗರದ ಸುಂಕದ ಕಟ್ಟೆ ನಿವಾಸಿಯಾಗಿರುವ ಹೆಚ್.ವಿ.ಚಂದ್ರ ಶೇಖರ್ (89) ಎಂದು ಗುರುತಿಸಲಾಗಿದೆ.
ತಂದೆ ಮೃತ ಪಟ್ಟ ವಿಚಾರವನ್ನು ಪೊಲೀಸರ ಮೂಲಕ ಮಕ್ಕಳಿಗೆ ತಿಳಿಸಿದರೂ ತಂದೆಯ ಮೃತದೇಹವನ್ನು ಮಕ್ಕಳು ಪಡೆದುಕೊಳ್ಳಲು ನಿರಾಕರಿಸಿದ್ದಾರೆ. ಐವರು ಮಕ್ಕಳನ್ನು ಹೊಂದಿರುವ ಇವರು ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಿಂದ ಅಸಮದಾನಗೊಂಡು ಬಸ್ ಹತ್ತಿ ಧರ್ಮಸ್ಥಳಕ್ಕೆ ಬಂದಿದ್ದಾರೆ. ಖಾಸಗಿ ಲಾಡ್ಜ್ ಒಂದರಲ್ಲಿ ರೂಮ್ ಪಡೆದಿದ್ದ ಚಂದ್ರಶೇಖರ್ ಅಲ್ಲೇ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ಇದ್ದನ್ನು ಗಮನಿಸಿದ ರೂಮ್ ಬಾಯ್ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ತಕ್ಷಣ ಸ್ಥಳಕ್ಕೆ ಬಂದ ಧರ್ಮಸ್ಥಳ ಪೊಲೀಸರು ಚಂದ್ರಶೇಖರ್ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಅವರಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ಸಂಬಂಧಿಗಳಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆದ್ರೆ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಮಾಹಿತಿ ಸಿಕ್ಕರೂ ತಂದೆಯ ಮೃತ ದೇಹವೇ ನಮಗೆ ಬೇಡ ಎಂದು ಮಕ್ಕಳು ಹೇಳಿದ್ದಾಗಿ ತಿಳಿದುಬಂದಿದೆ. ಮಕ್ಕಳು ಮೃತ ದೇಹ ಪಡೆಯಲು ಬಾರದ ಹಿನ್ನಲೆಯಲ್ಲಿ ಮೃತ ದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ.