Wednesday, September 16, 2026
spot_imgspot_img
spot_imgspot_img

ಓಜೋನ್: ಜೀವಜಗತ್ತಿನ ಕಾಣದ ಕವಚ

- Advertisement -
- Advertisement -

ಮಳೆ ಬಂದಾಗ ನಾವು ಛತ್ರಿ ಹಿಡಿಯುತ್ತೇವೆ. ಬಿಸಿಲು ತೀವ್ರವಾದಾಗ ನೆರಳನ್ನು ಹುಡುಕುತ್ತೇವೆ. ಮನುಷ್ಯನಿಗೆ ರಕ್ಷಣೆ ಅಗತ್ಯವೆಂಬುದು ಪ್ರಕೃತಿಯ ಮೂಲ ಸತ್ಯ. ಆದರೆ ಇಡೀ ಭೂಮಿಗೆ ರಕ್ಷಣೆ ನೀಡುವ ಒಂದು ಛತ್ರಿ ಇದೆ ಆದರೆ ಅದು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅದುವೇ ಓಜೋನ್ ಪದರ.

ಭೂಮಿಯಿಂದ ಸುಮಾರು ಮೇಲಿನ ವಾತಾವರಣದಲ್ಲಿ ವಾಯುಮಂಡಲದ ಸ್ಟ್ರಾಟೋಸ್ಫಿಯರ್ ಎಂಬ ಪದರದಲ್ಲಿ ಇರುವ ಈ ರಕ್ಷಣಾ ಪದರ ಸೂರ್ಯನ ಹಾನಿಕಾರಕ ಅತಿನೇರಳೆ ಕಿರಣಗಳ ವಿರುದ್ಧ ಜೀವಜಗತ್ತಿಗೆ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ನಾವು ದಿನನಿತ್ಯದ ಬದುಕಿನಲ್ಲಿ ಅದನ್ನು ನೆನಪಿಸಿಕೊಳ್ಳದಿದ್ದರೂ, ಅದರ ಸೇವೆ ನಿರಂತರ.

ಆದರೆ ಮನುಷ್ಯ ತನ್ನ ಸೌಲಭ್ಯಕ್ಕಾಗಿ ನಿರ್ಮಿಸಿಕೊಂಡ ಕೆಲವು ರಾಸಾಯನಿಕ ವಸ್ತುಗಳು ಇದೇ ರಕ್ಷಣಾ ಕವಚವನ್ನು ದುರ್ಬಲಗೊಳಿಸಲು ಆರಂಭಿಸಿದಾಗ, ವಿಜ್ಞಾನ ಜಗತ್ತು ಎಚ್ಚರಿಕೆಯ ಗಂಟೆ ಮೊಳಗಿಸಿತು. ಆ ಎಚ್ಚರಿಕೆಯನ್ನು ಜಗತ್ತು ಗಂಭೀರವಾಗಿ ಸ್ವೀಕರಿಸಿದ ಪರಿಣಾಮವೇ ಇಂದು ಓಜೋನ್ ಸಂರಕ್ಷಣೆಯ ಕಥೆ ಒಂದು ಆಶಾದಾಯಕ ಪರಿಸರಗಾಥೆಯಾಗಿ ರೂಪುಗೊಂಡಿದೆ. ಸೆಪ್ಟೆಂಬರ್ 16ರ ‘ವಿಶ್ವ ಓಜೋನ್ ದಿನ’ವಾಗಿದ್ದು, ಈ ಕಥೆಯನ್ನು ನೆನಪಿಸುವ ದಿನ.

ಓಜೋನ್ ಪದರ ಕ್ಷೀಣಿಸಿದರೆ ಅತಿನೇರಳೆ ಕಿರಣಗಳ ಪ್ರಮಾಣ ಹೆಚ್ಚಾಗಬಹುದು. ಇದರ ಪರಿಣಾಮ ಚರ್ಮ ಮತ್ತು ಕಣ್ಣುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಸಸ್ಯಗಳು, ಸಮುದ್ರದ ಸೂಕ್ಷ್ಮಜೀವಿಗಳು ಸೇರಿದಂತೆ ಪರಿಸರ ವ್ಯವಸ್ಥೆಯ ವಿವಿಧ ಭಾಗಗಳೂ ಇದರ ಪರಿಣಾಮವನ್ನು ಅನುಭವಿಸಬಹುದು. ಆದ್ದರಿಂದ ಓಜೋನ್ ರಕ್ಷಣೆ ಎಂದರೆ ಯಾವುದೋ ದೂರದ ಆಕಾಶದಲ್ಲಿರುವ ಅನಾಮಿಕ ಪದರದ ರಕ್ಷಣೆ ಅಲ್ಲ. ಅದು ಭೂಮಿಯ ಮೇಲಿನ ಜೀವವೈವಿಧ್ಯದ ಸುರಕ್ಷತೆಗೆ ಸಂಬಂಧಿಸಿದ ವಿಚಾರ.

ಓಜೋನ್ ಪದರದ ಅಪಾಯವನ್ನು ಎದುರಿಸಲು ಜಗತ್ತು 1987ರಲ್ಲಿ ಮಾಂಟ್ರಿಯಲ್ ಪ್ರೋಟೋಕಾಲ್‌ಗೆ ಒಪ್ಪಿಕೊಂಡಿತು. ರಾಷ್ಟ್ರಗಳ ಸಹಕಾರದಿಂದ ಓಜೋನ್ ಹಾನಿಕಾರಕ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವ ದಿಟ್ಟ ಕ್ರಮಗಳು ಆರಂಭವಾದವು. ಇದರ ಫಲವಾಗಿ ಓಜೋನ್ ಪದರ ಚೇತರಿಕೆಯ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಇಂದು ಪರಿಸರ ಕ್ಷೇತ್ರದ ಅತ್ಯಂತ ಪ್ರೇರಣಾದಾಯಕ ಸಂಗತಿಗಳಲ್ಲೊಂದು.

ಇಂದಿನ ಜೀವನದಲ್ಲಿ ಹವಾನಿಯಂತ್ರಕಗಳು, ರೆಫ್ರಿಜರೇಟರ್‌ಗಳು, ಶೀತಲೀಕರಣ ವ್ಯವಸ್ಥೆಗಳು ಅನಿವಾರ್ಯವಾಗಿವೆ. ಬೇಸಿಗೆಯ ಉಷ್ಣತೆ ಹೆಚ್ಚಿದಂತೆ ತಂಪಿನ ಬೇಡಿಕೆಯೂ ಹೆಚ್ಚುತ್ತಿದೆ. ಆದರೆ ತಂಪು ನೀಡುವ ತಂತ್ರಜ್ಞಾನವೇ ಹವಾಮಾನ ಬದಲಾವಣೆಯನ್ನು ವೇಗಗೊಳಿಸಿದರೆ ಪರಿಸ್ಥಿತಿ ವಿಚಿತ್ರವಾಗುತ್ತದೆ. ಆದುದರಿಂದಲೇ 2016ರ ಕಿಗಾಲಿ ತಿದ್ದುಪಡಿ ಮಹತ್ವವಾದುದು. HFCಗಳಂತಹ ಪ್ರಬಲ ಹಸಿರುಮನೆ ಅನಿಲಗಳ ಹಂತಹಂತದ ಕಡಿತದ ಮೂಲಕ ಓಜೋನ್ ಸಂರಕ್ಷಣೆಯ ಜೊತೆಗೆ ಹವಾಮಾನ ಸಂರಕ್ಷಣೆಯನ್ನೂ ಮುಂದುವರಿಸುವ ಉದ್ದೇಶ ಅದಕ್ಕಿದೆ. 2026ರಲ್ಲಿ ಕಿಗಾಲಿ ತಿದ್ದುಪಡಿಯ ಹತ್ತು ವರ್ಷಗಳು ಪೂರ್ಣಗೊಳ್ಳುತ್ತಿವೆ. ಆದ್ದರಿಂದ ಈ ವರ್ಷದ ಆಶಯವೂ ಶೀತಲೀಕರಣವನ್ನು ಹೆಚ್ಚು ಸುಸ್ಥಿರಗೊಳಿಸುವ ಜಾಗತಿಕ ಕ್ರಮದತ್ತ ಗಮನವನ್ನು ಸೆಳೆಯುತ್ತದೆ. ಇದು ಪರಿಸರ ಚಿಂತನೆಯಲ್ಲಿನ ಹೊಸ ತಿರುವು. ‘ತಂಪು ಬೇಕು. ಆದರೆ ತಂಪಿಗಾಗಿ ಭೂಮಿಯ ಉಷ್ಣತೆಯನ್ನು ಹೆಚ್ಚಿಸಬಾರದು.’

ಪರಿಸರಸ್ನೇಹಿ ಜೀವನವೆಂದರೆ ಎಲ್ಲ ಸೌಲಭ್ಯಗಳನ್ನು ತ್ಯಜಿಸುವುದಲ್ಲ. ಉತ್ತಮ ತಂತ್ರಜ್ಞಾನವನ್ನು ಆರಿಸಿಕೊಳ್ಳುವುದು, ಶಕ್ತಿಸಮರ್ಥ ಸಾಧನಗಳನ್ನು ಬಳಸುವುದು, ಅನಗತ್ಯ ವಿದ್ಯುತ್ ಬಳಕೆಯನ್ನು ತಪ್ಪಿಸುವುದು, ಹಳೆಯ ಶೀತಲೀಕರಣ ಉಪಕರಣಗಳನ್ನು ಜವಾಬ್ದಾರಿಯಿಂದ ನಿರ್ವಹಿಸುವುದು, ಪರಿಸರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಇವೆಲ್ಲವೂ ಪರಿಸರ ಸಂರಕ್ಷಣೆಯ ಭಾಗಗಳೇ. ಕೋಟ್ಯಂತರ ಮನೆಗಳ ಈ ಸಣ್ಣ ಬದಲಾವಣೆ ದೊಡ್ಡ ಪರಿಸರ ಫಲಿತಾಂಶಕ್ಕೆ ಕಾರಣವಾಗಬಹುದು.

ವಿಶ್ವ ಓಜೋನ್ ದಿನ ನಮಗೆ ಭಯವನ್ನು ಬಿತ್ತುವುದಕ್ಕಿಂತ ಭರವಸೆಯನ್ನು ನೀಡುತ್ತದೆ. ಒಮ್ಮೆ ಅಪಾಯದಲ್ಲಿದ್ದ ಓಜೋನ್ ಪದರದ ರಕ್ಷಣೆಗೆ ಜಗತ್ತು ಒಂದಾಯಿತು. ವಿಜ್ಞಾನಕ್ಕೆ ಕಿವಿಗೊಟ್ಟಿತು. ನೀತಿಗಳನ್ನು ರೂಪಿಸಿತು. ಕೈಗಾರಿಕಾ ಪದ್ಧತಿಗಳನ್ನು ಬದಲಿಸಿತು. ಪರಿಣಾಮವಾಗಿ ಚೇತರಿಕೆಯ ಸಾಧ್ಯತೆ ಮೂಡಿತು. ಹಾಗಾದರೆ ಹವಾಮಾನ ಬದಲಾವಣೆಯ ಸವಾಲಿನಲ್ಲೂ ಇದೇ ಮಾದರಿಯನ್ನು ಏಕೆ ಅನುಸರಿಸಬಾರದು?

ಇಂದಿನ ಪರಿಸರ ಸಂಕಷ್ಟದ ನಡುವೆ ವಿಶ್ವ ಓಜೋನ್ ದಿನದ ಸಂದೇಶ ಇನ್ನಷ್ಟು ಪ್ರಸ್ತುತವಾಗಿದೆ: ‘ಒಗ್ಗಟ್ಟಿನ ಕ್ರಮಕ್ಕೆ ಪರ್ಯಾಯವಿಲ್ಲ. ಭೂಮಿಗೆ ಕಾಣದ ಛತ್ರಿಯಾಗಿರುವ ಓಜೋನ್ ಪದರ ಪ್ರತಿಯಾಗಿ ನಮ್ಮಿಂದ ಏನನ್ನೂ ಕೇಳುವುದಿಲ್ಲ. ಆದರೆ ಅದರ ಅಸ್ತಿತ್ವದ ಋಣವನ್ನು ತೀರಿಸುವ ಹೊಣೆ ನಮ್ಮ ಮೇಲಿದೆ.

ನಾವು ಮುಂದಿನ ಪೀಳಿಗೆಗೆ ಆಸ್ತಿಯಾಗಿ ಮನೆ, ಹಣ, ತಂತ್ರಜ್ಞಾನವನ್ನು ಕೊಡಬಹುದು. ಆದರೆ ಅವುಗಳಿಗಿಂತ ದೊಡ್ಡ ಕೊಡುಗೆ ಎಂದರೆ ಉಸಿರಾಡಲು ಯೋಗ್ಯವಾದ ವಾತಾವರಣ, ಬದುಕಲು ಸುರಕ್ಷಿತವಾದ ಭೂಮಿ ಮತ್ತು ನೋಡಲು ನಿರ್ಮಲವಾದ ಆಕಾಶ. ಹೀಗಿರುವಾಗ, ಆಕಾಶದ ಛತ್ರಿ ನಮ್ಮ ತಲೆಯ ಮೇಲೆ ಇರಲಿ. ಅದರ ನೆರಳಿನಲ್ಲಿ ಜೀವಜಗತ್ತು ನಿರ್ಭಯವಾಗಿ ಬೆಳೆಯಲಿ.

ಡಾ. ಮೈತ್ರಿ ಭಟ್, ವಿಟ್ಲ

- Advertisement -

Related news

error: Content is protected !!