Friday, April 26, 2024
spot_imgspot_img
spot_imgspot_img

ಮರಣ ಶಾಸನ/ವೀಲುನಾಮೆ ಬಗ್ಗೆ ಸಂಕ್ಷಿಪ್ತ ಮಾಹಿತಿ

- Advertisement -G L Acharya panikkar
- Advertisement -

ಪಿ. ಜಯರಾಮ ರೈ BA,LLB
ನ್ಯಾಯವಾದಿ ಮತ್ತುನೋಟರಿ
ಬಿ.ಸಿ. ರೋಡ್


ವೀಲುನಾಮೆ ಅಥವಾ ಮರಣ ಶಾಸನವೆನ್ನುವುದು ಒಬ್ಬ ವ್ಯಕ್ತಿ ಆತನಿಗೆ ಸೇರಿದ ಯಾವುದೇ ರೀತಿಯ
ಸ್ವತ್ತು, ವಸ್ತು, ಹಣ ಇತ್ಯಾದಿಗಳ ಬಗ್ಗೆ ಅಂದರೆ ತನಗೆ ಸೇರಿದ/ತನ್ನ ಸ್ವಂತದ ಅಥವಾ ಹಕ್ಕು ಇರುವ ವಸ್ತುವಿನ
ಬಗ್ಗೆ ಆತನ ಮರಣಾ ನಂತರದಲ್ಲಿ ಅದು ಯಾರ್‍ಯಾರಿಗೆ ಎಷ್ಟೆಷುಸೇರಬೇಕು ಎಂಬಿತ್ಯಾದಿಯಾಗಿ, ತನ್ನ
ಮರಣಾನಂತರದ ಕುರಿತು ತಾನು ಜೀವಂತವಿರುವಾಗಲೇ ಮಾಡಿಡುವ/ಬರೆದಿಡುವ ಒಂದು ವ್ಯವಸ್ಥೆ/ದಾಖಲೆ.
ವೀಲುನಾಮೆಗೆ ಒಪ್ಪಿದ ಸ್ವತ್ತು, ಆಸ್ತಿ, ಹಣ ಇತ್ಯಾದಿ ಯಾವುದಾದರೂ ಆತನ ಸ್ವಂತದ್ದು ಆಗಿದ್ದಲ್ಲಿ ಮತ್ತು ಆ ಬಗ್ಗೆಆತನಿಗೆ ಸ್ವಂತ ವ್ಯವಹರಿಸುವ ಹಕ್ಕು ಇದ್ದಲ್ಲಿ ಅಥವಾ ಆತನಿಗೆ ಅಂಶಿಕ ಹಕ್ಕು ಇದ್ದಲ್ಲಿ ಆತನಿಗೆ ಇರುವ ಹಕ್ಕಿಗೆ ಸಂಬಂಧಪಟ್ಟ ಅಂಶದ ಬಗ್ಗೆ ಮಾತ್ರ ವೀಲುನಾಮೆ ಬರೆದಿಡಲು ಅವಕಾಶವಿರುತ್ತದೆ. ಉದಾ: ಒಬ್ಬ ವ್ಯಕ್ತಿ ತಾನು ಖರೀದಿಸಿದ ಭೂಮಿ ಅಥವಾ ಸ್ವಂತ ಖಾತೆಯಲ್ಲಿರುವ ಹಣ ಇತ್ಯಾದಿಗಳ ಬಗ್ಗೆ ಅವನ ಮರಣಾ ನಂತರ ಯಾರಿಗೆ ಸೇರಬೇಕೆಂದು ವೀಲುನಾಮೆ ಬರೆದಿಡುವರೇ ಸಂಪೂರ್ಣ ಹಕ್ಕುದಾರನಾಗಿರುತ್ತಾನೆ, ಆದರೆ ಒಬ್ಬ ವ್ಯಕ್ತಿಗೆ ಒಂದು ಭೂಮಿಯು ಹಿರಿಯರಿಂದ ವಾರೀಸು ನೆಲೆಯಲ್ಲಿ ಬಂದಿರುವುದಾದಲ್ಲಿ (ಅವನ ಸ್ವಂತದಾಗಿರುವುದಿಲ್ಲ) ಅವನಿಗೆ ಅದರಲ್ಲಿ ಎಷ್ಟು ಅಂಶದ ಹಕ್ಕಿದೆ ಅಷ್ಟಕ್ಕೆ ಮಾತ್ರ ವೀಲುನಾಮೆ ಮೂಲಕ ಆತನ ಮರಣಾನಂತರದ ಕುರಿತು ವ್ಯವಸ್ಥೆ ಮಾಡಲು ಹಕುವುಳ್ಳವನಾಗಿರುತ್ತಾನೆ.

ಒಬ್ಬ ವ್ಯಕ್ತಿಯು ತಾನು ಮಾನಸಿಕವಾಗಿ ಸ್ಥಿತಪ್ರಜ್ಞನಿದ್ದಾಗ ಆತನ ಮರಣಾ ನಂತರ ಆತನ ಸ್ವತ್ತುಗಳು ಯಾರಿಗೆ ಸೇರಬೇಕೆಂದು ಇಚ್ಚಿಸಿ ವೀಲುನಾಮೆ ಬರೆದಿಡಬಹುದು ಅಥವಾ ಆತನು ಸಾಯುವ ಕ್ಷಣದವರೆಗೂ ಬರೆದಿಡುವ ಹಕ್ಕು ಇದೆ. ಆತನು ಜೀವನ್ಮರಣದಲ್ಲಿರುವ ಸಮಯ ಸಹ ಆತನು ತನ್ನ ಇಚ್ಚೆ ವ್ಯಕ್ತಪಡಿಸಿವೀಲುನಾಮೆ ಬರೆದಿಡಬಹುದು, ಆದರೆ ಮಾನಸಿಕ ಅಸ್ವಸ್ಥ ವ್ಯಕ್ತಿ ವೀಲುನಾಮೆ ಬರೆದರೆ ಮತ್ತು ಬರೆದಿಡುವ ಕಾಲದಲ್ಲಿ ಆತನು ಮಾನಸಿಕ ಅಸ್ವಸ್ಥನೆಂದು ಪುರಾವೆಗೊಂಡರೆ ಅಂತಹ ವೀಲುನಾಮೆ ಸಿಂಧುವಾಗತಕ್ಕದಲ್ಲ.ಯಾವುದೇ ಒಬ್ಬ ವ್ಯಕ್ತಿ ಎಷ್ಟೆ ವೃದ್ಧಾಪ್ಯನಾದರೂ ಮಾನಸಿಕ ಸ್ಥಿತಿ ಸರಿ ಇರುವ ಸಮಯದಲ್ಲಿ ಆತನು ವೀಲುನಾಮೆ ಬರೆದಿಡಬಹುದಾಗಿದೆ.

ಸಾಮಾನ್ಯವಾಗಿ ಯಾವುದೇ ಒಂದು ಸ್ಥಿರ ಸ್ವತ್ತು ಇನ್ನೊಬ್ಬನ ಹೆಸರಿಗೆ ವರ್ಗಾವಣೆಯಾಗಬೇಕಾದರೆ ಅಂತಹ ಯಾವುದೇ ದಾಖಲೆ ನೋಂದಾವಣೆಯಾಗಲೇ ತಕ್ಕದಾಗಿರುತ್ತದೆ, ಆದರೆ ವೀಲುನಾಮೆ ಎಂಬ ದಾಖಲೆಯ ವಿಶೇಷತೆ ಏನೆಂದರೆ, ಅದು ಕಡ್ಡಾಯವಾಗಿ ನೋಂದಾವಣೆಯಾಗತಕ್ಕ ದಾಖಲೆಯಾಗಿರುವುದಿಲ್ಲ, ಅದು ನೋಂದಾವಣೆಯಾದರೂ, ನೋಂದಾವಣೆ ಆಗದೇ ಇದ್ದರು, ಅದಕ್ಕೆ ಕಾನೂನಿನಲ್ಲಿ ಸಮಾನ ಸ್ಥಾನಮಾನ,ಸಾಕ್ಷಿದಾರರು ಮಾತ್ರ ಅವಶ್ಯಕ.


ವೀಲುನಾಮೆಯ ಮತ್ತೊಂದು ವಿಶೇಷತೆ ಎಂದರೆ ಎಲ್ಲಾ ದಾಖಲೆಗಳು ದಾಖಲೆ ನೋಂದಾವಣೆಯಾದ
ತಕ್ಷಣದಿಂದ ಕಾರ್ಯಗತವಾಗುವುದಾಗಿದೆ ಮತ್ತು ಆ ನೆಲೆಯಲ್ಲಿ ಖಾತೆ ಬದಲಾವಣೆ ಇತ್ಯಾದಿ ಪ್ರಕ್ರಿಯೆ
ಪ್ರಾರಂಭವಾಗುತ್ತದೆ, ಆದರೆ ವೀಲುನಾಮೆಯನ್ನು ಬರೆದಿಟ್ಟವರ ಜೀವಿತ ಕಾಲದ ತನಕ ಅದನ್ನು ಯಾವುದೇ
ರೀತಿಯಿಂದ ಉಪಯೋಗಿಸುವಂತಿಲ್ಲ ಮತ್ತು ವೀಲುನಾಮೆ ಬರೆದಿಟ್ಟವರ ಮರಣಾನಂತರವೇ ಅಂದರೆ ಮರಣ
ದಾಖಲಾತಿ ಲಗತ್ತಿಸಿದಾಗ ಮಾತ್ರಅದು ಕಾರ್ಯಗತವಾಗುವುದು. ಆದರೆ ವೀಲುನಾಮೆ ಬರೆದಿಟ್ಟ ದಿನಾಂಕದ
ನಂತರವೂ ಅಂದರೆ ವೀಲುನಾಮೆ ಬರೆದಿಟ್ಟವ್ಯಕ್ತಿಯ ಜೀವಿತ ಕಾಲದ ತನಕ ಸದ್ರಿ ವೀಲುನಾಮೆಯನ್ನು ಯಾವುದೇ ಸಮಯ ರದ್ದುಪಡಿಸಿ ಬೇರೆ ವೀಲುನಾಮೆಯನ್ನು ಬರೆದಿಡಬಹುದಾಗಿದೆ ಅಥವಾ ಸದ್ರಿ ವೀಲುನಾಮೆಗೊಪ್ಪಿದ ಭೂಮಿಯ ಬಗ್ಗೆ ಇತರ ವ್ಯವಸ್ಥೆಯನ್ನು ಸಹ ಮಾಡಬಹುದಾಗಿದೆ, ಆದರೆ ವೀಲುನಾಮೆಗೊಪ್ಪಿದ ಭೂಮಿ/ವಸ್ತುವಿನ ಬಗ್ಗೆ ಆತನ ಜೀವಿತಕಾಲದಲ್ಲಿಪರಭಾರೆ ಇತ್ಯಾದಿ ಮಾಡದೇ ಇದ್ದಲ್ಲಿ ಮಾತ್ರ ಆತನ ಮರಣಾ ನಂತರ ವೀಲುನಾಮೆಯ ಶರ್ತ ಜಾರಿಯಾಗುವುದಾಗಿದೆ.

ಯಾವುದೇ ಒಂದು ಕ್ರಯಪತ್ರ, ದಾನಪತ್ರ, ವಿಭಾಗಪತ್ರ ಇತ್ಯಾದಿ ದಾಖಲೆಗಳು ಒಮ್ಮೆ ನೋಂದಾವಣೆಯಾದಲ್ಲಿ, ಅವುಗಳನ್ನು ಇನ್ನೊಬ್ಬ ವ್ಯಕ್ತಿಯು ಅದರ ಸಿಂಧುತ್ವದ ಬಗ್ಗೆ ಪ್ರಶ್ನಿಸಿದಲ್ಲಿ, ಅಂತಹ ದಾಖಲೆಯನ್ನು ನ್ಯಾಯಾಲಯವು ಅಸಿಂಧು ಎಂದು ಘೋಷಿಸಿದಲ್ಲಿ ಮಾತ್ರ ಅಂತಹ ದಾಖಲೆ ಅಸಿಂಧು ದಾಖಲೆಯಾಗುವುದು, ಆದರೆ ವೀಲುನಾಮೆ ಎಂಬ ದಾಖಲೆಯು ನೋಂದಾವಣೆಯಾದರೂ ನೋಂದಾವಣೆಯಾಗದಿದ್ದರೂ ಅದರ ಸಿಂಧುತ್ವವನ್ನು ಪ್ರಶ್ನಿಸಿದಲ್ಲಿ ಅದು ಮುಂದೆ ನ್ಯಾಯಾಲಯದಲ್ಲಿ ಅಥವಾ ಸಂದರ್ಭಾನುಸಾರ ಇತರ ನೆಲೆಯಲ್ಲಿ ಸಿಂಧುವೆಂದು ಸಾಬೀತಾಗುವ ತನಕ, ಅದನ್ನು ಸಿಂಧು ಅಥವಾ ಅಸಿಂಧು ಎಂದು ಪರಿಗಣಿಸಲಾಗದು. ಅದೇ ರೀತಿ ಮೇಲೆ ತಿಳಿಸಿದಂತೆ ಕ್ರಯಪತ್ರ, ದಾನಪತ್ರ, ವಿಭಾಗಪತ್ರ ಇತ್ಯಾದಿ ದಾಖಲೆಗಳು ಒಮ್ಮೆ ನೋಂದಾವಣೆಯಾದರೆ, ಆ ನೆಲೆಯಲ್ಲಿ ಖಾತೆ ದಾಖಲಿಸುವುದು ಕಂದಾಯ ಇಲಾಖೆಯ ಕರ್ತವ್ಯ, ಆದರೆ ವೀಲುನಾಮೆ ನೆಲೆಯಲ್ಲಿ ಅದು ನೋಂದಾಯಿತ ದಾಖಲೆಯಾಗಿದ್ದರು ಸಹ ಆ ನೆಲೆಯಲ್ಲಿ ಖಾತೆ ದಾಖಲಿಸಲು ಅರ್ಜಿ ಸಲ್ಲಿಸಿದಾಗ ಅದರ ಸಿಂಧುತ್ವದ ಬಗ್ಗೆ ಆಕ್ಷೇಪಣೆ ಬಂದಲ್ಲಿ ಆ ಸಮಯ ಅಂತಹ ವೀಲುನಾಮೆಯನ್ನು ಸಿವಿಲ್ ನ್ಯಾಯಾಲಯದ ಮೂಲಕ ಅಥವಾ ಇತರ ನೆಲೆಯಲ್ಲಿ ಪುರಾವೆಗೊಳಿಸುವ ತನಕ ಅಂತಹ ವೀಲುನಾಮೆಯ ನೆಲೆಯಲ್ಲಿ ಯಾವುದೇ ಖಾತೆ ದಾಖಲಿಸುವುದು ಇತ್ಯಾದಿ ಸಮಂಜಸವಲ್ಲ. ಅದೇ ರೀತಿ ನ್ಯಾಯಾಲಯದಲ್ಲಿ ಸಹ ವೀಲುನಾಮೆಯ ಸಿಂಧುತ್ವದ ಬಗ್ಗೆ ಪ್ರಶ್ನೆ ಬಂದಾಗ ವೀಲುನಾಮೆಯ ಸಾಕಿದಾರರು ಹಾಗೂ ಬರವಣಿಗೆದಾರ(scibe) ಇವರ ಸಾಕಿಯು ವೀಲುನಾಮೆಯ ಸಿಂಧುತ್ವವನ್ನು ಪುರಾವೆಗೊಳಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ.


ವೀಲುನಾಮೆ ಎಂಬ ದಾಖಲೆಯು ಈ ಮೂಲಕ ಇತರ ಎಲ್ಲಾ ದಾಖಲೆಗಳಿಂದ ಭಿನ್ನವಾಗಿದ್ದು,
ಯಾವುದೇ ವ್ಯವಹರಣೆಗಳಿಗೆ ಸಂಬಂಧಿಸಿದಂತೆ ವೀಲುನಾಮೆ ನೆಲೆಯಲ್ಲಿ ಹಕ್ಕು ಸ್ಥಾಪನೆಯಾದ ಭೂಮಿ ಯಾ
ಇತರ ಸ್ವತ್ತುಗಳ ಬಗ್ಗೆ ಅಥವಾ ಅವುಗಳ ಆಧಾರದಲ್ಲಿ ವ್ಯವಹರಿಸುವ ಪೂರ್ವದಲ್ಲಿ ವೀಲುನಾಮೆಯನ್ನು
ಸಂಶಯರಹಿತ ದಾಖಲೆ ಎಂಬುದನ್ನು ಮನವರಿಕೆ ಮಾಡಿಕೊಂಡ ನಂತರವೇ ವ್ಯವಹರಿಸುವುದು ಸೂಕ್ತ.


ಪಿ. ಜಯರಾಮ ರೈ BA,LLB
ನ್ಯಾಯವಾದಿ ಮತ್ತುನೋಟರಿ
ಬಿ.ಸಿ. ರೋಡ್

- Advertisement -

Related news

error: Content is protected !!