


ಮಂಗಳೂರು: ನಗರದ ಪಡೀಲ್ ಬಳಿಯಿರುವ ಕಾಂಚನಾ ಹುಂಡೈ ಕಾರ್ ಶೋರೂಂ ಮತ್ತು ವರ್ಕ್ಶಾಪ್ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಪೇಂಟಿಂಗ್ ಬೂತ್ನಲ್ಲಿದ್ದ ಒಂದು ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಹೊರಗಡೆ ನಿಲ್ಲಿಸಲಾಗಿದ್ದ ಇತರೆ 8 ಕಾರುಗಳಿಗೆ ಭಾಗಶಃ ಹಾನಿಯಾಗಿದೆ.
ಸ್ಥಳಕ್ಕೆ ತಕ್ಷಣ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಮೂಲಕ ಸಂಭವಿಸಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಘಟನೆ ಕುರಿತಂತೆ ಪಾಂಡೇಶ್ವರ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ಕೆ. ಎನ್. ಅವರು ಮಾಹಿತಿ ನೀಡಿದ್ದಾರೆ.
“ಶೋರೂಂನ ವರ್ಕ್ಶಾಪ್ನಲ್ಲಿ ಕಾರುಗಳಿಗೆ ಪೇಂಟ್ ಮಾಡುವ ಪೇಂಟಿಂಗ್ ಬೂತ್ನಿಂದಲೇ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಆ ಬೂತ್ನ ಒಳಗಿದ್ದ ಒಂದು ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ. ಬೆಂಕಿಯ ಶಾಖ ಹಾಗೂ ಹೊಗೆಯಿಂದಾಗಿ ಹೊರಗಡೆ ನಿಲ್ಲಿಸಲಾಗಿದ್ದ ಇತರ 8 ಕಾರುಗಳಿಗೆ ಸಣ್ಣಪುಟ್ಟ ಹಾನಿ ಸಂಭವಿಸಿದೆ. ಒಟ್ಟಾರೆಯಾಗಿ 9 ಕಾರುಗಳು ಹಾನಿಗೊಳಗಾಗಿವೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ನಿಂದಲೇ ಬೆಂಕಿ ಹೊತ್ತಿಕೊಂಡಿರುವ ಶಂಕೆಯಿದೆ” ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಪ್ರಭಾರ ಮುಖ್ಯ ಅಗ್ನಿಶಾಮಕ ಅಧಿಕಾರಿ ಶಂಕರ್ ಎಂ, ಕದ್ರಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಮೋದ್ ಹಾಗೂ ಪಾಂಡೇಶ್ವರ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ಕೆ.ಎನ್. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಒಟ್ಟು 5 ಮಂದಿ ಅಧಿಕಾರಿಗಳು ಹಾಗೂ 10 ಮಂದಿ ಸಿಬ್ಬಂದಿ ಭಾಗವಹಿಸಿದ್ದರು. ಕದ್ರಿ ಠಾಣೆಯಿಂದ ಒಂದು ಹಾಗೂ ಪಾಂಡೇಶ್ವರ ಠಾಣೆಯಿಂದ ಒಂದು ವಾಹನ ಸೇರಿದಂತೆ ಒಟ್ಟು ಎರಡು ಅಗ್ನಿಶಾಮಕ ವಾಹನಗಳನ್ನು ಬಳಸಿ ಬೆಂಕಿ ನಂದಿಸಲಾಗಿದೆ. ತ್ವರಿತ ಕಾರ್ಯಾಚರಣೆಯಿಂದಾಗಿ ಶೋರೂಂನ ಇತರೆ ಭಾಗಗಳಿಗೆ ಬೆಂಕಿ ವ್ಯಾಪಿಸುವುದು ತಪ್ಪಿದೆ.








