ನವದೆಹಲಿ: ದೇಶದಲ್ಲಿ ರಸಗೊಬ್ಬರ ಬೆಲೆ ಹೆಚ್ಚಳ ಕುರಿತಂತೆ ವಿಪಕ್ಷಗಳು ಕೇಂದ್ರ ಸರ್ಕಾರ ವಿರುದ್ಧ ಮುಗಿಬಿದ್ದ ಬೆನ್ನಲ್ಲೇ ಮಹತ್ವದ ನಿರ್ಧಾರವನ್ನು ಪ್ರಕಟಿಸಿರುವ ಪ್ರಧಾನಿ ಮೋದಿ ಯವರು, ರಸಗೊಬ್ಬರ ಮೇಲೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಬ್ಸಿಡಿ ಮೊತ್ತವನ್ನು ಹೆಚ್ಚಿಸುತ್ತಿರುವುದಾಗಿ ತಿಳಿಸಿದ್ದಾರೆ.

ರಸಗೊಬ್ಬರ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಯವರು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು. ಈ ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರಗಳ ಬೆಲೆ ಏರಿಕೆಯಾದರೂ ಕೂಡ ದೇಶದಲ್ಲಿ ರೈತರು ಹಳೆಯ ದರದಲ್ಲಿಯೇ ರಸಗೊಬ್ಬರ ಪಡೆಯಬೇಕು ಎಂದು ಸೂಚಿಸಿದ್ದರು.

ಇದರಂತೆ ಕೇಂದ್ರ ಸರ್ಕಾರ ರಸಗೊಬ್ಬರಗಳ ಮೇಲೆ ನೀಡುತ್ತಿದ್ದ ಸಬ್ಸಿಡಿ ಮೊತ್ತವನ್ನು ಶೇ.140 ರಷ್ಟು ಹೆಚ್ಚಳ ಮಾಡಿದ್ದು, ಒಂದು ಬ್ಯಾಗ್ ಡಿಎಪಿಗೆ 500 ರೂಪಾಯಿ ಬದಲಾಗಿ 1,200 ರೂಪಾಯಿ ಸಬ್ಸಿಡಿ ನೀಡಲಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ 14,775 ಕೋಟಿ ರೂಪಾಯಿ ಸಬ್ಸಿಡಿ ರೂಪದಲ್ಲಿ ವ್ಯಯ ಆಗಲಿದೆ. ರೈತರಿಗೆ ಹಳೇ ದರದಲ್ಲೇ ಗೊಬ್ಬರ ಲಭ್ಯವಾಗಲಿದೆ.

