

ಜಪಾನ್ ನ ದಕ್ಷಿಣ ಕರಾವಳಿ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಜಪಾನ್ ನ ದಕ್ಷಿಣದ ಮುಖ್ಯ ದ್ವೀಪವಾದ ಕ್ಯೂಶುವಿನ ಪೂರ್ವ ಕರಾವಳಿಯಲ್ಲಿ ಸುಮಾರು 30 ಕಿಲೋ ಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇರುವುದನ್ನು ಗುರುತಿಸಲಾಗಿದೆ ಎಂದು ವರದಿ ವಿವರಿಸಿದೆ.
ಪ್ರಬಲ ಭೂಕಂಪದಲ್ಲಿ ಸಂಭವಿಸಿರುವ ಸಾವು-ನೋವಿನ ಬಗ್ಗೆ ಈವರೆಗೆ ಯಾವ ಮಾಹಿತಿಯೂ ಬಂದಿಲ್ಲ. ಕ್ಯುಶುವಿನ ದಕ್ಷಿಣ ಕರಾವಳಿ ಮತ್ತು ಶಿಕೋಕು ಹತ್ತಿರದ ದ್ವೀಪದ ಉದ್ದಕ್ಕೂ 1 ಮೀಟರ್ ವರೆಗಿನ ಅಲೆಗಳು ಏಳುವ ಸಾಧ್ಯತೆ ಇದೆ. ಅಲ್ಲಿ ವಾಸವಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಂದು ಮುನ್ಸೂಚನೆ ನೀಡಲಾಗಿದೆ. ಭೂಕಂಪನದ ತೀವ್ರತೆ ಭೂ ಭಾಗದಲ್ಲಿಯೂ ಪರಿಣಾಮ ಬೀರಿದ್ದು, ಸಮುದ್ರ ತೀರದ ಹಲವು ಮನೆಗಳ ಕಿಟಕಿಗಳು ಹೊಡೆದಿವೆ. ಗೋಡೆಗಳು, ರಸ್ತೆಗಳು ಬಿರುಕುಬಿಟ್ಟಿವೆ. ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.