



ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಜರ್ಮನಿಯಿಂದ ಬೆಂಗಳೂರಿಗೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಲುಫ್ತಾನ್ಸಾ ಏರ್ಲೈನ್ಸ್ನಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿಕೊಂಡಿರುವ ಪ್ರಜ್ವಲ್ ರೇವಣ್ಣ, ಮೇ 31ರಂದು ಜರ್ಮನಿಯ ಮ್ಯೂನಿಚ್ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೇ 31ರ ಬೆಳಗ್ಗೆ 10:30ಕ್ಕೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವೆ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಂತೆ ಮೇ 31ರಂದು ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಆದರೆ, , ಪ್ರಜ್ವಲ್ ರೇವಣ್ಣ ಆಗಮಿಸುವ ವಿಮಾನ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಮೇ 31ರ ಮಧ್ಯರಾತ್ರಿ 12:30ಕ್ಕೆ ಬಂದಿಳಿಯಲಿದೆ.
ಇನ್ನು ಪ್ರಜ್ವಲ್ ರೇವಣ್ಣ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಎಸ್ಐಟಿ ಅಧಿಕಾರಿಗಳು ಬಂಧಿಸುವ ಎಲ್ಲಾ ಸಾಧ್ಯತೆಗಳಿವೆ, ಹೀಗಾಗಿ ಎಸ್ಐಟಿ ಅಧಿಕಾರಿಗಳು ಅಲರ್ಟ್ ಆಗಿದ್ದು, ಪ್ರಜ್ವಲ್ ರೇವಣ್ಣ ಯಾವ ವಿಮಾನದಲ್ಲಿ ಎಷ್ಟು ಗಂಟೆ ಬೆಂಗಳೂರಿಗೆ ಬರಲಿದೆ ಎಂದು ಇಂಚಿಚು ಮಾಹಿತಿಯನ್ನು ಕಲೆಹಾಕುತ್ತಿದೆ.
ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮತ್ತು ಅರೆಸ್ಟ್ ವಾರಂಟ್ ಸಹ ಜಾರಿಯಾಗಿದೆ. ಹೀಗಾಗಿ ಯಾವ ವಿಮಾನದಲ್ಲಿ ಪ್ರಜ್ವಲ್ ಬರುತ್ತಾರೆ ಎಂದು ಎಸ್ಐಟಿ ಮಾಹಿತಿ ಪಡೆದುಕೊಂಡು ವಶಕ್ಕೆ ಪಡೆಯಲಿದೆ. ಅದಕ್ಕೂ ಮೊದಲು ಇಮಿಗ್ರೇಷನ್ ಅಧಿಕಾರಿಗಳು ಪ್ರಜ್ವಲ್ ವಶಕ್ಕೆ ಪಡೆಯಲಿದ್ದು, ಬಳಿಕ ಎಸ್ಐಟಿಗೆ ಒಪ್ಪಿಸಲಿದ್ದಾರೆ. ಅದಾದ ಬಳಿಕ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಂಡು ಮೊದಲಿಗೆ ಅವರಿಗೆ ಮೆಡಿಕಲ್ ಚೆಕಪ್ ಮಾಡಿಸಲಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ತಮ್ಮ ವಶಕ್ಕೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಲಿದ್ದಾರೆ ಎಂಬ ಮಾಹಿತಿ ದೊರಕಿದೆ.