ವಿಟ್ಲ: ಉಡುಪಿಯ ಪರ್ಯಾಯದಲ್ಲಿ ಜಿಲ್ಲಾಧಿಕಾರಿ ಅವರು ಭಗವಧ್ವಜವನ್ನು ಹಾರಿಸಿರುವುದನ್ನು ಮತ್ತು ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಹಾರಿಸಬೇಡಿ ಎಂದು ಹೇಳಿಕೆ ನೀಡಿರುವ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಹಿಂದೂ ವಿರೋಧಿ ನಡೆಯನ್ನು ಬಿಜೆಪಿ ಖಂಡಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಮಾಧವ ಮಾವೆ ಹೇಳಿದರು.

ಬಿಸಿರೋಡಿನ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಪರ್ಯಾಯ ಕೇವಲ ಜಿಲ್ಲೆಗೆ ಸೀಮಿತವಾಗದೆ ದೇಶವೇ ನೋಡುವಂತಹ ದೊಡ್ಡ ಕಾರ್ಯಕ್ರಮವಾಗಿದೆ. ಆದದೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೇಸರಿ ಬಾವುಟವನ್ನು ಹಾರಿಸಬಾರದು ಎಂದು ಎಲ್ಲಿಯಾದರೂ ಕಾನೂನಿನಲ್ಲಿ ಇದೆಯಾ ಎಂದು ಪ್ರಶ್ನಿಸಿದರು.
ಭಾರತೀಯ ಜನತಾ ಪಾರ್ಟಿ ಎಲ್ಲರನ್ನೂ ಕೂಡ ಪ್ರೀತಿಸುವ ಕೆಲಸ ಮಾಡಿ ತೋರಿಸಿದೆ. ಕಾಂಗ್ರೆಸ್ ಹಾಗೂ ರಮಾನಾಥ ರೈ ಅವರು ಕೇವಲ ಮತಬ್ಯಾಂಕ್‌ಗಾಗಿ ಒಂದು ಸಮುದಾಯವನ್ನು ಓಲೈಕೆ ಮಾಡುವುದು ಇದೇ ಮೊದಲಲ್ಲ. ರಮಾನಾಥ ರೈ ಕೂಡ ಹಿಂದೂ ಸಮುದಾಯದವರಾಗಿದ್ದು, ಇಂತಹ ಹೇಳಿಕೆ ನೀಡಿರುವುದು ತಪ್ಪು ಎಂದು ಹೇಳಿದರು.
ಅಧಿವೇಶನದಲ್ಲಿ ಪಾಕಿಸ್ತಾನಕ್ಕೆ ಜೈ ಎಂದಾಗ ಯಾಕೆ ರಮಾನಾಥ ರೈರವರು ಮಾತನಾಡಿಲ್ಲ, ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೇಸರಿ ಧ್ವಜ ಹಿಂದೆಯೂ ಹಾಕಿದ್ದೇವೆ, ಮುಂದೆಯೂ ಹಾಕುತ್ತೇವೆ ಎಂದು ಹೇಳಿದ ಮಾಧವ ಮಾವ ಹಾಗೆ ಮಸೀದಿ ಹಾಗೂ ಚರ್ಚ್‌ಗಳ ಕಾರ್ಯಕ್ರಮಗಳ ವೇಳೆ ಹಾಕುವ ಬ್ಯಾನರ್‌ಗಳು ಅಥವಾ ಪತಾಕೆಗಳು ಇವರ ಕಣ್ಣಿಗೆ ಕಾಣಿಸುವುದಿಲ್ಲವೇ? ಎಂದು ಪ್ರಶ್ನಿಸಿದರಲ್ಲದೆ ರಾಜ್ಯದಲ್ಲಿ ಸಿ.ಎಂ.ಸಿದ್ದರಾಮಯ್ಯ ಅವರು ಬಂದ ಬಳಿಕ ಹಿಂದೂಗಳ ತೇಜೋವಧೆಯಾಗುತ್ತಿದೆ ಎಂದು ಆರೋಪಿಸಿದರು.
ಅನುಭವಿ ರಾಜಕಾರಣಿಯಾಗಿರುವ ನೀವು ಹಿಂದೂ ಧರ್ಮವನ್ನು ನಿಂದಿಸುವ ಕಾರ್ಯ ಶೋಭೆ ತರುವಂಥದಲ್ಲ. ಅಧಿವೇಶನದಲ್ಲಿ ಕರಾವಳಿ ಬಗ್ಗೆ ಕೇವಲವಾಗಿ ಮಾತನಾಡಿದಾಗ ಯಾಕೆ ನೀವು ಮಾತನಾಡಿಲ್ಲ, ಮಲಗಿದ್ದ ಹಿಂದೂಗಳನ್ನು ಎಚ್ಚರಿಸುವ ಕಾರ್ಯವನ್ನು ಮಾಡಿದ್ದಾರೆ ಎಂದ ಅವರು, ಶಾಸಕ ರಾಜೇಶ್ ನಾಯ್ಕ ಅವರು ಶಾಸಕರಾದ ಬಳಿಕ ಬಂಟ್ವಾಳ ಶಾಂತವಾಗಿತ್ತು, ಶಾಂತವಾಗಿದ್ದ ದ.ಕ.ಜಿಲ್ಲೆಯಲ್ಲಿ ಅಶಾಂತಿ ಉಂಟು ಮಾಡಿದ ಕೆಲಸ sigma_{6} ಮಾಡಿದ್ದಾರೆ ಎಂದು ಆರೋಪಿಸಿದರು.
ಕೆಂಪು ಕಲ್ಲು, ಮರಳು, ಜಲ್ಲಿ ಸಿಗುತ್ತಿಲ್ಲ, ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗಿದೆ. ನಮಗೆ ಸ್ವಾತಂತ್ರ ಸಿಕ್ಕಿದ್ಯಾ ಅಥವಾ ಇನ್ನೂ ಕೂಡ ಬ್ರಿಟಿಷ್ ಸರ್ಕಾರ ಇದೆಯೇ ಎಂಬ ಭಾವನೆ ನಮ್ಮಲ್ಲಿ ಕಾಡುತ್ತಿದೆ. ಇದೆಲ್ಲದರ ವಿರುದ್ಧ ಹೋರಾಟ ಮಾಡಿಯೇ ಸಿದ್ದ ಎಂದು ಹೇಳಿದರು ಮಾವರವರು, ಕಲ್ಲಡ್ಕದ ಪೈ ಓವರ್ ನಿಂದ ಮಂಗಳೂರುವರೆಗೆ ಪಾಲುದಾರ ಪಕ್ಷ ಹಾಕಿರುವ ಪತಾಕೆಗಳು ಕಾಣಿಸುವುದಿಲ್ಲವೇ ಎಂದು ಪ್ರಶ್ನಿಸಿದರಲ್ಲದೆ ಭಾರತೀಯ ಜನತಾ ಪಾರ್ಟಿ ಶಾಂತಿಗೆ ಧಕ್ಕೆಯಾಗುವಂತಹ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಮಂಡಲದ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ, ಶಿವಪುಸಾದ್ ಶೆಟ್ಟಿ, ಮಾಧ್ಯಮ ಪ್ರಮುಖ್ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು.
ನಾನು ದೇವಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾಕಬಾರದೆಂದು ಹೇಳಿಲ್ಲ
ಉಡುಪಿ ಜಿಲ್ಲಾಧಿಕಾರಿಗಳು ದೇವಸ್ಥಾನದ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಹಾರಿಸಿದ್ದಕ್ಕೆ ಉಡುಪಿಯಲ್ಲಿ ಕೆಲವರಿಂದ ಟೀಕೆಗಳು ಬಂತು ಅದರ ಮುಂದುವರಿದ ಭಾಗವಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರು ಕೇಸರಿ ಧ್ವಜವನ್ನು ಮತ್ತು ಇತರೆ ಯಾವುದೇ ಧರ್ಮದ ಧ್ವಜವನ್ನು ಹಾರಿಸಬಾರದು ಎಂದು ಹೇಳಿದ್ದೆ. ಆದರೆ ಕೆಲ ಮಾಧ್ಯಮದಲ್ಲಿ ನಾನು ದೇವಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾಕಬಾರದೆಂದು ಹೇಳಿದೆ ಎಂದು ಬಿಂಬಿಸಲಾಗಿದೆ. ನಾನು ಹೇಳಿರುವುದು ಒಂದು ನಿರ್ದಿಷ್ಟ ವಿಷಯದ ಬಗ್ಗೆ. ಸರಕಾರಿ ನೌಕರರು ಅದರಲ್ಲೂ ಹಿರಿಯ ಅಧಿಕಾರಿಯಾಗಿರುವಂತ ಜಿಲ್ಲಾಧಿಕಾರಿಗಳು ಯಾವುದೇ ಧರ್ಮಕ್ಕೆ ಸೀಮಿತವಾದ ಧ್ವಜವನ್ನು ಹಾರಿಸುವುದು ಸರಿಯಲ್ಲ ಎಂದು ಹೇಳಿರುತ್ತೇನೆ .ಅದಕ್ಕೆ ಸ್ಪಷ್ಟನೆಯನ್ನು ಈ ಮೂಲಕ ನೀಡುತ್ತಿದ್ದೇನೆ.
-ಬಿ. ರಮಾನಾಥ ರೈ, ಮಾಜಿ ಸಚಿವರು, ಕರ್ನಾಟಕ ಸರಕಾರ








