



ನವದೆಹಲಿ: ಕೇಂದ್ರ ಸರ್ಕಾರ ಸೋಮವಾರ(ಮೇ. 25) ಪೆಟ್ರೋಲ್ ಮೇಲಿನ ಬೆಲೆ ಪ್ರತಿ ಲೀಟರ್‌ಗೆ 2.61 ರೂ. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 2.71 ರೂ. ಏರಿಕೆ ಮಾಡಿದೆ. ಇದು ಕಳೆದ 10 ದಿನಗಳಲ್ಲಿ 4ನೇ ಬಾರಿಗೆ ಮಾಡಿದ ದರ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 110.89 ರೂ. ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 98.80 ರೂ.ಗೆ ತಲುಪಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನೆಲೆ ಮೇ 15ರಿಂದ ಈಚೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದರವನ್ನು ಹೆಚ್ಚಿಸಿವೆ.
ಮೇ 15 ರಂದು ಮೊದಲ ಬಾರಿಗೆ ಏಕಾಏಕಿ ಪೆಟ್ರೋಲ್, ಡೀಸೆಲ್ ಮೇಲಿನ ಬೆಲೆಯನ್ನು 3 ರೂ. ಹೆಚ್ಚಳ ಮಾಡಿತ್ತು. ಬಳಿಕ ಮೇ 23 ರಂದು ಪೆಟ್ರೋಲ್ ದರವನ್ನು 87 ಪೈಸೆ ಮತ್ತು ಡೀಸೆಲ್ 91 ಪೈಸೆ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಪೆಟ್ರೋಲ್ ಮೇಲಿನ ಬೆಲೆ 2.61 ರೂ. ಮತ್ತು ಡೀಸೆಲ್ ಮೇಲಿನ ಬೆಲೆ 2.71 ರೂ. ಏರಿಸಿದ್ದು, ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ದರ ಪರಿಷ್ಕರಣೆ ಪುನರಾರಂಭವಾದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಒಟ್ಟು ಸುಮಾರು 7.5 ರೂ. ಏರಿಕೆಯಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ತೈಲ ಮಾರುಕಟ್ಟೆ ಕಂಪನಿಗಳ ಆಮದು ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಈ ದರ ಏರಿಕೆ ಮಾಡಲಾಗಿದೆ.







